ಕುದೂರು : ಸೆ. 17ರಂದು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಭದ್ರಾಪುರ ಗೇಟ್ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ನಾಲ್ಕು ಜನ ಸಾವನ್ನಪ್ಪಿದ್ದರು. ಮತ್ತು ಒಬ್ಬ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಆದರೆ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಈಗ ಮೃತಪಟ್ಟಿದ್ದಾರೆ. ಇದರೊಂದಿಗೆ ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಮೃತರ ಸಂಖ್ಯೆ ಐದಕ್ಕೇರಿದೆ.
ಹೌದು, ಬೆಂಗಳೂರಿನ ಬಾಗಲಗುಂಟೆಯಲ್ಲಿ ವಾಸವಾಗಿದ್ದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿವಾನ ಗ್ರಾಮದ ಕುಸುಮ (21) ಮೃತ ಯುವತಿ. ಘಟನೆಯಲ್ಲಿ ಗಂಭೀರವಾಗಿದ್ದ ಅವರನ್ನು ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ಶಸ್ತ್ರಚಿಕಿತ್ಸೆ ಕೂಡ ಮಾಡಲಾಗಿತ್ತು. ಎರಡು ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕುಸುಮ ಕೊನೆಯುಸಿರೆಳೆದಿದ್ದಾಳೆ. ಮರಕ್ಕೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕುಸುಮ ಅವರ ತಂದೆ ನಂಜುಂಡಪ್ಪ (56), ಶಾರದಮ್ಮ (50), ತಾಯಿ ಭದ್ರಮ್ಮ (80) ಹಾಗೂ ನಂಜುಂಡಪ್ಪ ಸ್ನೇಹಿತ ನಾಗರಾಜು (54) ಸ್ಥಳದಲ್ಲೇ ಮೃತಪಟ್ಟಿದ್ದರು. ದಂಪತಿಯ ಏಕೈಕ ಪುತ್ರಿಯಾಗಿದ್ದ ಕುಸುಮ ಅವರು, ಬೆಂಗಳೂರಿನ ಕಾಲೇಜೊಂದರಲ್ಲಿ ಎಂ.ಬಿಎ ಓದುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.