ಕರ್ನಾಟಕ
ಚನ್ನಪಟ್ಟಣ ರಿಸಲ್ಟ್ ಮೇಲೆ ನಿಂತಿದ್ಯಾ ಜಮೀರ್ ಸಚಿವ ಸ್ಥಾನದ ಭವಿಷ್ಯ?
ಎಚ್‌ಡಿಕೆಗೆ ಕರಿಯಾ ಎನ್ನುವ ಮೂಲಕ ಎಡವಟ್ಟು ಮಾಡಿದ ಜಮೀರ್ ಅಹ್ಮದ್ ಭವಿಷ್ಯವೂ ಚನ್ನಪಟ್ಟಣ ಫಲಿತಾಂಶದ ಮೇಲೆ ನಿಂತಿದೆ ಎನ್ನಲಾಗ್ತಿದೆ..
ಆಡಳಿತರೂಡ ಕಾಂಗ್ರೆಸ್ ಪಕ್ಷಕ್ಕೆ 3 ಕ್ಷೇತ್ರಗಳ ಉಪಚುನಾವಣೆ ಪ್ರತಿಷ್ಠೆಯಾಗಿದೆ.. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಗೆಲ್ಲಲು ಭಾರಿ ಕಸರತ್ತು ಕೂಡ ನಡೆಸಿವೆ.. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ನೇರಾನೇರ ಸವಾಲು ಹಾಕುವ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿದ್ರೆ ಉಪಕದನದ ಪ್ರಚಾರದ ಅಖಾಡದಲ್ಲಿ ಕೊನೆ ಕ್ಷಣಕ್ಕೆ ಎಂಟ್ರಿಕೊಟ್ಟು ಎಚ್‌ಡಿಕೆಗೆ ಕರಿಯಾ ಎನ್ನುವ ಮೂಲಕ ಎಡವಟ್ಟು ಮಾಡಿದ ಜಮೀರ್ ಅಹ್ಮದ್ ಭವಿಷ್ಯವೂ ಚನ್ನಪಟ್ಟಣ ಫಲಿತಾಂಶದ ಮೇಲೆ ನಿಂತಿದೆ ಎನ್ನಲಾಗ್ತಿದೆ..
ಬೈಎಲೆಕ್ಷನ್‌ನಲ್ಲಿ ಸಂಚಲನ ಸೃಷ್ಟಿಸಿದ ʼಕರಿಯಾʼ ಸ್ಟೇಟ್‌ಮೆಂಟ್..!
ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ನಾಳೆ ಹೊರಬೀಳಲಿದೆ.. ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ನ ಸಿ.ಪಿ. ಯೋಗೇಶ್ವರ್ ನಡುವೆ ಜಿದ್ದಾಜಿದ್ದಿನ ಫೈಟ್ ಕೂಡ ನಡೆದಿದೆ.. ಮೊದಲಿನಿಂದಲೂ ಕ್ಷೇತ್ರದಲ್ಲಿ ಯೋಗೇಶ್ವರ್ ಪರವಾಗಿಯೇ ಅಲೆ ಇತ್ತು.. ಆದ್ರೆ ಕೊನೆ ಕ್ಷಣದಲ್ಲಿ ಪ್ರಚಾರದ ಅಖಾಡಕ್ಕೆ ಎಂಟ್ರಿಕೊಟ್ಟಿದ್ದ ಜಮೀರ್ ಅಹ್ಮದ್ ಟೀಕಿಸುವ ಭರದಲ್ಲಿ ಎಚ್.ಡಿ. ಕುಮಾರಸ್ವಾಮಿಯನ್ನ ಬಿಜೆಪಿಗಿಂತ ʼಕರಿಯಾʼ ಡೇಂಜರ್ ಎಂದಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು.. ಜಮೀರ್ ಅಹ್ಮದ್ ಹೇಳಿಕೆಯೇ ಬೈಎಲೆಕ್ಷನ್ ಅಖಾಡದಲ್ಲಿ ಬಿಜೆಪಿ-ಜೆಡಿಎಸ್ ನಾಯಕರಿಗೆ ಅಸ್ತವಾಗಿತ್ತು.. ಎಚ್‌ಡಿಕೆ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನೇ ಪ್ರಚಾರದಲ್ಲಿ ʼದೋಸ್ತಿʼ ನಾಯಕರು ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದರು.. ಇದೇ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಗೆಲುವಿಗೆ ದೊಡ್ಡ ಅಡ್ಡಗಾಲು ಎನ್ನಲಾಗ್ತಿದೆ..
ಸೋಲಿನ ಸುಳಿವು ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್..!
ಬೈಎಲೆಕ್ಷನ್ ಮತದಾನ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸೋಲಿನ ಆತಂಕ ಹೊರಹಾಕಿದ್ದಾರೆ.. ಅದಕ್ಕೆ ಕಾರಣ ಉಪಚುನಾವಣೆಯಲ್ಲಿ ಜಮೀರ್ ನೀಡಿದ್ದ ಕರಿಯಾ ಹೇಳಿಕೆ ಎನ್ನಲಾಗ್ತಿದೆ.. ಸ್ವತಃ ಸಿ.ಪಿ. ಯೋಗೇಶ್ವರ್ ಕೂಡ ಎಚ್.ಡಿ. ಕುಮಾರಸ್ವಾಮಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಜಮೀರ್ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.. ಎಚ್‌ಡಿಕೆ ಕುಟುಂಬವನ್ನ ಖರೀದಿಸುವ ಬಗ್ಗೆ ಮಾತನಾಡಿದ್ದ ಬಗ್ಗೆಯೂ ಬೇಸರ ಹೊರಹಾಕಿದ್ದರು.. ಇದರ ಜೊತೆಗೆ ಶೇ. 85ರಷ್ಟು ಮತದಾನವಾಗಿರುವುದು ಜೆಡಿಎಸ್ ಪಕ್ಷಕ್ಕೆ ಲಾಭವಾಗಿದೆ ಎನ್ನುವ ಬಲವಾದ ಮಾತು ಕೇಳಿ ಬರುತ್ತಿದೆ..
ಹೈವೋಲ್ಟೇಜ್ ಕ್ಷೇತ್ರ ಸೋತರೆ ಜಮೀರ್ ತಲೆದಂಡ ಫಿಕ್ಸ್!?
ಚನ್ನಪಟ್ಟಣ ಸೋಲಿನ ಸುಳಿವನ್ನ ಸ್ವತಃ ಕಾಂಗ್ರೆಸ್ ಅಭ್ಯರ್ಥಿಯೇ ಹೊರಹಾಕಿದ್ದಾರೆ.. ಎಲೆಕ್ಷನ್‌ನಲ್ಲಿ ನಿಖಿಲ್‌ಗೆ ಮತ್ತೆ ಸೋಲಿನ ರುಚಿ ತೋರಿಸಿ ಎಚ್.ಡಿ. ಕುಮಾರಸ್ವಾಮಿ ಕಟ್ಟಿಹಾಕಬೇಕು ಎನ್ನುವ ಡಿ.ಕೆ. ಬ್ರದರ್ಸ್ ಪ್ಲ್ಯಾನ್‌ಗೂ ಜಮೀರ್ ಅಹ್ಮದ್ ನೀಡಿರುವ ಹೇಳಿಕೆಯೇ ಅಡ್ಡಗಾಲಾಗಿದೆ.. ಸಿಎಂ ಕುರ್ಚಿ ಫೈಟ್‌ಗೂ ರಿಸಲ್ಟ್ ತನಗೆ ಮೈಲೇಜ್ ಕೊಡಬಹುದು ಎಂದುಕೊಂಡಿದ್ದ ಡಿ.ಕೆ. ಶಿವಕುಮಾರ್‌ಗೂ ಆತಂಕ ಹೆಚ್ಚಿಸಿದೆ.. ಯಾವಾಗ ಚನ್ನಪಟ್ಟಣ ಕುರಿತು ನೆಗೆಟಿವ್ ವರದಿಗಳು ಹೊರಬರಲು ಶುರುವಾಯ್ತೋ ಆಗಲೇ ಜಮೀರ್ ಅಹ್ಮದ್ ತಲೆದಂಡಕ್ಕೂ ಕೂಗಿ ಜೋರಾಗಿದೆ.. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಜಮೀರ್ ಅಹ್ಮದ್ ಹೇಳಿಕೆಯನ್ನ ಬಹಿರಂಗವಾಗಿಯೇ ಖಂಡಿಸಿದ್ದಾರೆ.. ಅಲ್ಲದೇ ಹಳೇ ಮೈಸೂರು ಭಾಗದ ಶಾಸಕರು, ಸಚಿವರು ಕೂಡ ʼಕರಿಯಾʼ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ಗೃಹ ಸಚಿವ ಜಿ. ಪರಮೇಶ್ವರ್ ಕೂಡ ನಮ್ಮಲ್ಲಿ ಶಿಸ್ತು ಸಮಿತಿ ಇದೆ, ಅದೇ ಎಲ್ಲಾ ನೋಡಿಕೊಳ್ಳುತ್ತೆ ಎಂದಿರೋದು ಜಮೀರ್ ಸಚಿವ ಸ್ಥಾನಕ್ಕೆ ಕುತ್ತು ತರೋದು ಫಿಕ್ಸ್ ಎನ್ನಲಾಗ್ತಿದೆ.. ಒಟ್ಟಾರೆ.. ಚನ್ನಪಟ್ಟಣದ ಸೋಲು-ಗೆಲುವಿನ ಆಧಾರದ ಮೇಲೆ ಜಮೀರ್ ಅಹ್ಮದ್ ಭವಿಷ್ಯ ನಿಂತಿದೆ.. ಒಂದು ವೇಳೆ, ನಿಖಿಲ್ ಗೆದ್ದರೆ ಜಮೀರ್ ತಲೆದಂಡಕ್ಕೆ ಒತ್ತಡ ಇನ್ನಷ್ಟು ಹೆಚ್ಚುವುದಂತೂ ಗ್ಯಾರಂಟಿ.. ಒಂದು ವೇಳೆ ಯೋಗೇಶ್ವರ್ ಗೆದ್ದರೆ ತಲೆದಂಡದಿಂದ ಪಾರಾದಂತೆ..