ಕ್ರೀಡೆಗಳು

IND VS NEWZ:2ನೇ ದಿನದ ಆಟ ಸ್ಪಿನ್ನರ್​​ಗಳದ್ದೇ ಕಾರುಬಾರು ಭಾರತದ ವಿರುದ್ಧ ಕಿವೀಸ್‌ಗೆ 301 ರನ್‌ಗಳ ಭರ್ಜರಿ ಮುನ್ನಡೆ

ಮಿಚೆಲ್‌ ಸ್ಯಾಂಟ್ನರ್‌, ವಾಷಿಂಗ್ಟನ್​​​ ಸುಂದರ್‌ ಸೂಪರ್‌ ಆಟ ಇಬ್ಬರು ಸೇರಿ ಬರೋಬ್ಬರಿ 14 ವಿಕೆಟ್​​​

ಪುಣೆ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಸ್ಪಿನ್ನರ್‌ಗಳ ಆರ್ಭಟವೇ ಮುಂದುವರಿದಿದ್ದು, ಉಭಯ ತಂಡಗಳ ಒಟ್ಟು 14 ವಿಕೆಟ್‌ ಪತನಗೊಂಡಿದೆ. ಭಾರತದ ವಿರುದ್ಧ ತನ್ನ 2ನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ತಂಡ 2ನೇ ದಿನದ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 198 ರನ್‌ ಗಳಿಸಿದ್ದು, 301 ರನ್‌ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

243 ರನ್‌ಗಳ ಹಿನ್ನಡೆಯೊಂದಿಗೆ ಕ್ರೀಸ್‌ ಆರಂಭಿಸಿದ ಟೀಂ ಇಂಡಿಯಾ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಕೇವಲ 156 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ಹೊರತಾಗಿಯೂ ನಾಯಕ ಟಾಮ್‌ ಲಾಥಮ್‌ ಅವರ ಅಮೋಘ ಅರ್ಧಶತಕದೊಂದಿಗೆ 200 ರನ್‌ಗಳ ಗಡಿ ಸಮೀಪಿಸುವಲ್ಲಿ ಯಶಸ್ವಿಯಾಯಿತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಲಾಥಮ್‌ 86 ರನ್‌ (133 ಎಸೆತ, 10 ಬೌಂಡರಿ) ಗಳಿಸಿದ್ರೆ, ವಿಲ್‌ ಯಂಗ್‌ 23 ರನ್‌, ಡೆವೋನ್‌ ಕಾನ್ವೆ 17 ರನ್‌, ಡೇರಿಲ್‌ ಮಿಚೆಲ್‌ 18 ರನ್‌ ಹಾಗೂ ರಚಿನ್‌ ರವೀಂದ್ರ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಇನ್ನೂ ಟಾಮ್‌ ಬ್ಲಂಡೆಲ್‌ 30 ರನ್‌ (70 ಎಸೆತ, 2 ಬೌಂಡರಿ), ಗ್ಲೆನ್‌ ಫಿಲಿಪ್ಸ್‌ 9 ರನ್‌ ಗಳಿಸಿ ಅಜೇಯರಾಗುಳಿದಿದ್ದಾರೆ. ಶನಿವಾರ 3ನೇ ದಿನದಾಟ ಆರಂಭಿಸಲಿದ್ದಾರೆ.