ದೇಶ

ರತನ್ ಟಾಟಾ ಆಸ್ತಿ ವಿವರಣೆ ಹಾಗೂ ಯಾರ್ಯಾರಿಗೆ ಎಷ್ಟೆಷ್ಟು ಪಾಲು..?

Ratan Tata Will : ಭಾರತ ಕಂಡ ಅಪ್ರತಿಮ ಉದ್ಯಮಿ ರತನ್‌ ಟಾಟಾ ಅವರ ಮರಣ ಇಚ್ಛಾ ಪತ್ರ ಬಹಿರಂಗವಾಗಿದೆ. ಸುಮಾರು 10 ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಯಾವುದೇ ಗೊಂದಲವಿಲ್ಲದೇ ರತನ್‌ ಟಾಟಾ ಹಂಚಿದ್ದಾರೆ. ಶಂತನು ನಾಯ್ಡು, ಮೆಚ್ಚಿನ ನಾಯಿ ಟಿಟೋ ಹೆಸರನ್ನು ರತನ್‌ ಟಾಟಾ ತಮ್ಮ ವಿಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಸುಮಾರು 21 ವರ್ಷಗಳ ಕಾಲ ಟಾಟಾ ಗ್ರೂಪ್‌ನ ಮುಖ್ಯಸ್ಥರಾಗಿದ್ದ ರತನ್‌ ಟಾಟಾ 5.7 ಶತಕೋಟಿ ಡಾಲರ್‌ ಉದ್ಯಮವನ್ನು 100 ಶತಕೋಟಿ ಡಾಲರ್‌ಗೆ ವಿಸ್ತರಿಸಿದ್ದರು. ಕೇವಲ ಉದ್ಯಮ ಮಾತ್ರವಲ್ಲದೇ ಸಮಾಜ ಸೇವೆ, ದಾನದ ಮೂಲಕವೂ ರತನ್‌ ಟಾಟಾ ಹೆಸರುವಾಸಿಯಾಗಿದ್ರು. ಈಗ ತಮ್ಮ ಪಾಲಿನ ಬಹುತೇಕ ಆಸ್ತಿಯನ್ನು ಕೂಡ ಟ್ರಸ್ಟ್‌ಗೆ ವರ್ಗಾಯಿಸಬೇಕು ಎಂದು ಬರೆದಿರುವುದು, ಸಮಾಜದ ಮೇಲಿನ ರತನ್‌ ಟಾಟಾ ಅವರಿಗಿದ್ದ ಕಾಳಜಿಯನ್ನು ತೋರಿಸುತ್ತದೆ.

ಹೌದು, ತಮ್ಮ ಆಸ್ತಿಯನ್ನು ರತನ್‌ ಟಾಟಾ ತಮ್ಮ ಸಹೋದರಿಯರಾದ ಶಿರೀನ್‌ ಮತ್ತು ಡೀನಾ ಜೆಜೀಬೋಯ್‌ಗೆ ಹಂಚಿದ್ದಾರೆ. ಇವರಿಬ್ಬರು ರತನ್‌ ಟಾಟಾ ಅವರ ಮಲತಾಯಿಯ ಮಕ್ಕಳು. ಜೊತೆಗೆ ತಮ್ಮ ಸಹೋದರ ಜಿಮ್ಮಿ ಟಾಟಾ ಹಾಗೂ ಅಚ್ಚುಮೆಚ್ಚಿನ ಸಹಾಯಕ ಶಂತನು ನಾಯ್ಡುಗೂ ಆಸ್ತಿಯಲ್ಲಿ ಪಾಲು ನೀಡಿದ್ದಾರೆ. ವಿಶೇಷ ಏನಂದ್ರೇ ತಮ್ಮ ಅಚ್ಚು ಮೆಚ್ಚಿನ ನಾಯಿ ಟಿಟೋಗೂ ಕೂಡ ತಮ್ಮ ಸಂಪತ್ತಿನ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅದಲ್ಲದೇ ಚಾರಿಟಿ ಟ್ರಸ್ಟ್‌ಗಳಿಗೆ ಷೇರುಗಳನ್ನು ನೀಡುವ ಟಾಟಾ ಗ್ರೂಫ್‌ನ ಪದ್ಧತಿಗೆ ಅನುಗುಣವಾಗಿ ರತನ್‌ ಟಾಟಾ ಎಂಡೋಮೆಂಟ್‌ ಫೌಂಡೇಶನ್‌ ರತನ್‌ ಟಾಟಾ ಅವರ ಷೇರುಗಳ ದೊಡ್ಡ ಭಾಗವನ್ನು ಪಡೆದಿದೆ.

ಟೈಮ್ಸ್ ಆಫ್ ಇಂಡಿಯಾದ ಪ್ರಕಾರ ರತನ್ ಟಾಟಾ ಅವರು ತಮ್ಮ ಜರ್ಮನ್ ಶೆಫರ್ಡ್ ನಾಯಿ ಟಿಟೊಗೆ ಲೈಫ್‌ಟೈಮ್‌ ಆರೈಕೆಯನ್ನು ತಮ್ಮ ಮರಣ ಇಚ್ಛಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಾಮಾನ್ಯವಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಸಾಕುಪ್ರಾಣಿಗಳನ್ನು ವಿಲ್‌ನಲ್ಲಿ ಸೇರಿಸುವುದು ಸಾಮಾನ್ಯ. ಆದರೆ, ಭಾರತದಲ್ಲಿ ಇದು ಅಪರೂಪದ ಘಟನೆ. ಟಿಟೋ ಎಂಬ ಹೆಸರಿನ ನಾಯಿ ಸತ್ತ ಬಳಿಕ ಅದೇ ಹೆಸರಿನ ಜರ್ಮನ್‌ ಶೆಫರ್ಡ್‌ ನಾಯಿಯನ್ನು ಐದರಿಂದ ಆರು ವರ್ಷಗಳ ಹಿಂದೆ ರತನ್‌ ಟಾಟಾ ದತ್ತು ಪಡೆದಿದ್ದರು. ಟಿಟೋವನ್ನು ರತನ್‌ ಟಾಟಾ ಮನೆಯ ಅಡುಗೆ ಮಾಡುವ ರಾಜನ್‌ ಶಾ ನೋಡಿಕೊಳ್ಳುತ್ತಿದ್ದಾರೆ.

ರತನ್ ಟಾಟಾ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದ ಆಪ್ತ ಸ್ನೇಹಿತ ಶಂತನು ನಾಯ್ಡು ಅವರ ಹೆಸರನ್ನು ಕೂಡ ವಿಲ್‌ನಲ್ಲಿ ಉಲ್ಲೇಖಿಸಲಾಗಿದೆ. ಶಂತನು ನಾಯ್ಡು ಅವರ ಕಂಪನಿ ಗುಡ್‌ಫೆಲೋಸ್‌ನಲ್ಲಿ ಇದ್ದ ತಮ್ಮ ಷೇರುಗಳನ್ನು ರತನ್‌ ಟಾಟಾ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ವಿದೇಶದಲ್ಲಿ ಶಿಕ್ಷಣ ಪಡೆಯಲು ತೆಗೆದುಕೊಂಡ ವೈಯಕ್ತಿಕ ಸಾಲವನ್ನು ಕೂಡ ಮನ್ನಾ ಮಾಡಲಾಗಿದೆ. ಜೊತೆಗೆ ರತನ್‌ ಟಾಟಾ ಜೊತೆ ಮೂರು ದಶಕಗಳಿಂದ ಜೊತೆಯಿದ್ದು, ಅವರ ಮನೆಯನ್ನು ನೋಡಿಕೊಳ್ಳುತ್ತಿದ್ದ ಬಟ್ಲರ್‌ ಸುಬ್ಬಯ್ಯ ಅವರ ಹೆಸರನ್ನು ಕೂಡ ವಿಲ್‌ನಲ್ಲಿ ಸೇರಿಸಲಾಗಿದೆ. ಅವರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಾಗಿದೆ ಎಂದು ವರದಿಯಾಗಿದೆ.

ರತನ್‌ ಟಾಟಾ ತಮ್ಮ ಅನೇಕ ಆಸ್ತಿಗಳನ್ನು ತಮ್ಮ ಸಹೋದರ ಜಿಮ್ಮಿ ಟಾಟಾ ಹಾಗೂ ಸಹೋದರಿಯರಾದ ಶಿರೀನ್ ಮತ್ತು ಡೀನಾ ಜೆಜೀಬಾಯ್‌ಗೆ ಬರೆದಿದ್ದಾರೆ. ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್‌ನಂತಹ ಗ್ರೂಪ್ ಕಂಪನಿಗಳಲ್ಲಿ ಇರುವ ತಮ್ಮ ಷೇರುಗಳನ್ನು ರತನ್ ಟಾಟಾ ಎಂಡೋಮೆಂಟ್ ಫೌಂಡೇಶನ್ (ಆರ್‌ಟಿಇಎಫ್) ಚಾರಿಟಿ ಟ್ರಸ್ಟ್‌ಗೆ ನೀಡಬೇಕು ಎಂದು ವಿಲ್‌ನಲ್ಲಿ ಸ್ಷಷ್ಟಪಡಿಸಲಾಗಿದೆ. ಈ ಟ್ರಸ್ಟ್‌ನ ನೇತೃತ್ವವನ್ನು ಟಾಟಾ ಸನ್ಸ್‌ನ ಪ್ರಸ್ತುತ ಚೇರ್‌ಮೆನ್‌ ಎನ್ ಚಂದ್ರಶೇಖರನ್ ವಹಿಸುವ ನಿರೀಕ್ಷೆ ಇದೆ. ಆರ್‌ಎನ್‌ಟಿ ಅಸೋಸಿಯೇಟ್ಸ್ ಮತ್ತು ಆರ್‌ಎನ್‌ಟಿ ಅಡ್ವೈಸರ್‌ ಮೂಲಕ ಮಾಡಲಾಗಿದ್ದ ಸ್ಟ್ರಾರ್ಟ್‌ಅಪ್‌ ಹೂಡಿಕೆಗಳನ್ನು ಮಾರಾಟ ಮಾಡಿ, ಆರ್‌ಟಿಇಎಫ್‌ಗೆ ಆದಾಯವನ್ನು ವರ್ಗಾಯಿಸಲು ನಿರ್ದೇಶಿಸಲಾಗಿದೆ.

ಇನ್ನು, ರತನ್‌ ಟಾಟಾ ಅವರ ಮನೆ ಮತ್ತು ಕಾರುಗಳ ವಿಷಯಕ್ಕೆ ಬಂದರೆ, ರತನ್‌ ಟಾಟಾ ಅವರು ತಮ್ಮ ಕೊನೆ ದಿನದವರೆಗೂ ವಾಸಿಸುತ್ತಿದ್ದ ಮುಂಬೈನ ಕೊಲಾಬಾದಲ್ಲಿನ ಹಲೇಕೈ ಮನೆಯು ಟಾಟಾ ಸನ್ಸ್‌ ಭಾಗವಾಗಿರುವ ಇವಾರ್ಟ್ ಇನ್ವೆಸ್ಟ್‌ಮೆಂಟ್ಸ್‌ ಒಡೆತನದಲ್ಲಿದೆ. ಇದನ್ನು ಮುಂದೆ ಏನು ಮಾಡುವುದು ಎಂಬುದರ ಬಗ್ಗೆ ಯಾವುದೇ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಅದಲ್ಲದೇ ರತನ್‌ ಟಾಟಾ ಅವರು ಹೆಚ್ಚುವರಿಯಾಗಿ ಅಲಿಬಾಗ್‌ನಲ್ಲಿ 2,000 ಚದರ ಅಡಿ ಬೀಚ್ ಬಂಗಲೆಯನ್ನು ನಿರ್ಮಿಸಿದ್ದರು. ಅದರ ಭವಿಷ್ಯ ಕೂಡ ಇನ್ನು ತೀರ್ಮಾನ ಆಗಿಲ್ಲ. ಮುಂಬೈನ ಜುಹು ತಾರಾ ರಸ್ತೆಯಲ್ಲಿರುವ ಎರಡು ಅಂತಸ್ತಿನ ಮನೆಯನ್ನು ರತನ್ ಟಾಟಾ ಮತ್ತು ಅವರ ಕುಟುಂಬ ನೇವಲ್‌ ಟಾಟಾ ನಿಧನದ ಬಳಿಕ ಅನುವಂಶಿಕವಾಗಿ ಪಡೆದಿದ್ದಾರೆ. ಆದರೆ, ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ಈ ಮನೆ ಖಾಲಿಯಿದ್ದು, ಮಾರಾಟ ಮಾಡಲು ಯೋಜಿಸಲಾಗಿದೆ.

ಟಾಟಾ ಅವರ ಕೊಲೊಬಾ ನಿವಾಸ ಮತ್ತು ತಾಜ್ ವೆಲ್ಲಿಂಗ್ಟನ್ ಮ್ಯೂಸ್ ಅಪಾರ್ಟ್‌ಮೆಂಟ್‌ನಲ್ಲಿ 20-30 ಐಷಾರಾಮಿ ಕಾರುಗಳಿವೆ. ಇವುಗಳನ್ನು ಹರಾಜು ಮೂಲಕ ಮಾರುವ ಸಾಧ್ಯತೆ ಇದೆ. ಇಲ್ಲ ಅಂದ್ರೇ ಟಾಟಾ ಗ್ರೂಪ್‌ ಪುಣೆಯಲ್ಲಿರುವ ತನ್ನ ಮ್ಯೂಸಿಯಂಗಾಗಿ ಈ ಕಾರುಗಳನ್ನು ಖರೀದಿಸಬಹುದು ಎನ್ನಲಾಗುತ್ತಿದೆ. ಇನ್ನು, ರತನ್‌ ಟಾಟಾ ಅವರು ಪಡೆದ ಪ್ರಶಸ್ತಿಗಳ ದೇಣಿಗೆ ಹಾಗೂ ಪ್ರಶಸ್ತಿಗಳನ್ನು ಟಾಟಾ ಸೆಂಟ್ರಲ್‌ ಆರ್ಕೈವ್ಸ್‌ ಪಡೆಯಲಿದ್ದು, ಟಾಟಾ ಪರಂಪರೆಯನ್ನು ಮುಂದುವರಿಸಲಿದೆ. ರತನ್ ಟಾಟಾ 100 ಬಿಲಿಯನ್ ಡಾಲರ್‌ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದ್ದರು. ಆದರೂ ಕೂಡ ಕಡಿಮೆ ಪ್ರಮಾಣದ ಮಾಲೀಕತ್ವ ಹೊಂದಿದ್ದರಿಂದ ಅವರು ಎಂದಿಗೂ ಶ್ರೀಮಂತರ ಪಟ್ಟಿಗೆ ಸೇರಿಲ್ಲ ಎಂದು ಹೇಳಲಾಗಿದೆ. ಟಾಟಾ ಗ್ರೂಪ್‌ನಲ್ಲಿ ಶೇ.0.83ರಷ್ಟು ಪಾಲನ್ನು ರತನ್‌ ಟಾಟಾ ಹೊಂದಿದ್ದು, 7 ಸಾವಿರ ಕೋಟಿಗೂ ಹೆಚ್ಚು ಮೌಲ್ಯ ಹೊಂದಿದೆ ಎನ್ನಲಾಗಿದೆ.

ಇನ್ನು, ಬಾಂಬೆ ಹೈಕೋರ್ಟ್‌ನ ಕಾನೂನು ಪ್ರಕ್ರಿಯೆಯಂತೆ ರತನ್‌ ಟಾಟಾ ಅವರ ಮರಣ ಇಚ್ಛಾ ಪತ್ರ ಅನುಷ್ಠಾನಕ್ಕೆ ಬರಲಿದ್ದು, ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹಲವು ತಿಂಗಳುಗಳೇ ಆಗಬಹುದು ಎನ್ನಲಾಗಿದೆ. ತಮ್ಮ ವಿಲ್‌ ಅನ್ನು ಅನುಷ್ಠಾನಗೊಳಿಸಲು ರತನ್‌ ಟಾಟಾ ಅವರು ವಕೀಲರಾದ ಡೇರಿಯಸ್ ಖಂಬಾಟಾ ಮತ್ತು ತಮ್ಮ ಆಪ್ತ ಮೆಹ್ಲಿ ಮಿಸ್ತ್ರಿ ಹಾಗೂ ಸಹೋದರಿಯರಾದ ಶಿರೀನ್ ಮತ್ತು ಡೀನ್ನಾ ಜೆಜೀಭೋಯ್ ಅವರನ್ನು ನಿರ್ವಾಹಕರನ್ನಾಗಿ ನೇಮಿಸಿದ್ದಾರೆ. ಈ ಮೂಲಕ ತಮ್ಮನ್ನು ನಂಬಿದ್ದವರನ್ನು ರತನ್‌ ಟಾಟಾ ಕೈಬಿಡಲ್ಲ ಎಂಬುದು ಸಾಬೀತಾಗಿದೆ. ಬಹುತೇಕ ಆಸ್ತಿಯನ್ನು ಟ್ರಸ್ಟ್‌ಗೆ ವರ್ಗಾಯಿಸಿರುವುದು ಅವರ ಸಮಾಜ ಸೇವೆಗ ಸಾಕ್ಷಿಯಾಗಿದೆ.