ಕರ್ನಾಟಕ

ಮಳೆಯಿಂದಾಗಿ ಸೌತೆಕಾಯಿ ಬೆಲೆ ಧಿಡೀರ್​ ಕುಸಿತ - ಮೂಟೆ ಸೌತೆಕಾಯಿ ಬೆಲೆ ಇಷ್ಟೇನಾ ಅಂತಿದ್ದಾನೆ ಗ್ರಾಹಕ..

ರೈತನಿಗೆ ಮಳೆ ಬಂದ್ರೂ ಕಷ್ಟ, ಬರದೆ ಇದ್ರೂ ಕಷ್ಟ ಎನ್ನುವಂತಾಗಿದೆ, ಈಗ ನೋಡಿ ಸತತ ಸುರಿದ ಭಾರಿ ಮಳೆಗೆ ಸೌತೆಕಾಯಿ ಬೆಳೆದ ರೈತರು ಕಂಗಾಲಾಗುವಂತೆ ಮಾಡಿದೆ..

ಚಿಕ್ಕಬಳ್ಳಾಪುರ: ಮಳೆ ನಿಂತರೂ ಮಳೆಯಿಂದಾದ ಅವಾಂತರಗಳಿಗೇನು ಕಮ್ಮಿ ಇಲ್ಲ. ರೈತರು ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೀತಾರೆ, ಆದ್ರೆ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗಿ ಅನ್ನದಾತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸಾಲ ಸೋಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಬೆಳೆದ ಸೌತೆಕಾಯಿ ಆರು ಕಾಸು ಮೂರು ಕಾಸಿಗೆ ಬಿಕರಿಯಾಗುತ್ತಿದ್ದು, ರೈತರು ಕಣ್ಣೀರುಡುವಂತಾಗಿದೆ

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹನಿ ಹನಿ ನೀರುಣಿಸಿ ಬಂಗಾರದಂಹತ ಬೆಳೆ ತೆಗೀತಾರೆ. ಹೂವು ಹಣ್ಣು ತರಕಾರಿ ಎಲ್ಲವನ್ನೂ ಬೆಳೆಯುವ ರೈತರು ಈ ಬಾರಿ ಯಥೇಚ್ಛವಾಗಿ ಸೌತೆಕಾಯಿಯನ್ನ ಬೆಳೆದಿದ್ದಾರೆ. ನಿರಂತರ ಮಳೆಯಿಂದ ಸೌತೆಕಾಯಿ ಇಳುವರಿಯೂ ಹೆಚ್ಚಾಗಿದ್ದು ಚಿಕ್ಕಬಳ್ಳಾಪುರ ತರಕಾರಿ ಮಾರುಕಟ್ಟೆಗೆ ಹೆಚ್ಚಿನ ಸೌತೆಕಾಯಿ ಬಂದಿದೆ. ಇದ್ರಿಂದ ಒಂದು ಮೂಟೆ ಸೌತೆಕಾಯಿ ಕೇವಲ 100 ರಿಂದ 150 ರೂ.ಗೆ ಬಿಕರಿಯಾಗುತ್ತಿದ್ದು ಸೌತೆಕಾಯಿ ಬೆಳೆದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ.