ಕರ್ನಾಟಕ

ಇಂದು ಘೋಷಣೆಯಾಗತ್ತಾ ಚನ್ನಪಟ್ಟಣ ಜೆಡಿಎಸ್‌ ಅಭ್ಯರ್ಥಿ ಹೆಸರು?

ಈಗ ಯೋಗೇಶ್ವರ್ ಅವರೇ ಪ್ರಬಲ ಪೈಪೋಟಿಯಾಗಿರುವುದರಿಂದ ದೇವೇಗೌಡರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಿದರೆ ಮಾತ್ರ ಟಫ್​ ಫೈಟ್​ ನೀಡಬಹುದು ಎಂಬುವುದು ಕಾರ್ಯಕರ್ತರ ಅಭಿಪ್ರಾಯ.

ಬೆಂಗಳೂರು: ಸದ್ಯ ರಾಜ್ಯ ರಾಜಕೀಯದಲ್ಲಿ ಭಾರಿ ಕೂತುಹಲ ಮುಡಿಸುತ್ತಿರುವುದು ಚನ್ನಪಟ್ಟಣ ಉಪಚುನಾವಣೆ. ಮಾಜಿ ಸಚಿವ ಸಿ.ಪಿ.ಯೋಗೆಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಜೆಡಿಎಸ್ ನಾಯಕರು ತಮ್ಮ ಪಕ್ಷದಿಂದ ಕಣಕ್ಕಿಳಿಸಬೇಕಾದ ಅಭ್ಯರ್ಥಿಗಾಗಿ ಕೊನೆಯ ಕ್ಷಣದ ಕಸರತ್ತು ನಡೆಸಿದ್ದು, ಗುರುವಾರ ಅಂತಿಮಗೊಳ್ಳುವ ಸಾಧ್ಯತೆಯಿದೆ. 

ಈಗ ಯೋಗೇಶ್ವರ್ ಅವರೇ ಪ್ರಬಲ ಪೈಪೋಟಿಯಾಗಿರುವುದರಿಂದ ದೇವೇಗೌಡರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಿದರೆ ಮಾತ್ರ ಟಫ್ ಫೈಟ್ ನೀಡಬಹುದು ಎಂಬುವುದು ಕಾರ್ಯಕರ್ತರ ಅಭಿಪ್ರಾಯ.  ಈ ಪೈಕಿ ನಿಖಿಲ್ ಕುಮಾರಸ್ವಾಮಿ ಹೆಸರು ಮುಂಚೂಣಿಯಲ್ಲಿದೆ. ಆದರೆ, ಮಹಿಳೆಯೊಬ್ಬರನ್ನು ಅಭ್ಯರ್ಥಿ ಯಾಗಿಸಿದರೆ ಹೇಗೆ ಎಂಬ ಚಿಂತನೆಯೂ ಇದೆ ಹೀಗಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರ ಪತ್ನಿ ಅನಸೂಯ ಅವರ ಹೆಸರು ಕೇಳಿಬರುತ್ತಿವೆ. ಈ ನಡುವೆ ಕುಟುಂಬದವರು ಬೇಡ ಎನ್ನುವುದಾದರೆ ಪಕ್ಷದ ಕಾರ್ಯಕರ್ತರ ಪೈಕಿ ಚನ್ನಪಟ್ಟಣ ತಾಲೂಕು ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 

ಬುಧವಾರ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಮಾತುಕತೆ ನಡೆಸಿದರು. ನಿಖಿಲ್ ಅವರನ್ನೇ ಕಣಕ್ಕಿಳಿಯುವಂತೆ ಗೌಡರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈ ನಡುವೆ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿ ನಾಯಕರೊಂದಿಗೆ ಸಂಜೆ ಸಭೆ ನಿಗದಿಯಾಗಿ ಕೊನೆ ಕ್ಷಣದಲ್ಲಿ ರದ್ದಾಯಿತು. ಗುರುವಾರ ಸಭೆ ನಡೆಯುತ್ತದೆಯೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.