ವೈರಲ್

ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ವಿಶ್ವ ದಾಖಲೆ ಬರೆದು ಧೂಳೆಬ್ಬಿಸಿದ ಕ್ರಿಸ್ಟಿಯಾನೋ ರೊನಾಲ್ಡೊ

ದುಬೈ: ಪೋರ್ಚುಗಲ್‌ ತಂಡದ ಸ್ಟಾರ್​ ಫುಟ್ಬಾಲ್​ ಪ್ಲೇಯರ್​​ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. 1 ಬಿಲಿಯನ್‌ ಅನುಯಾಯಿಗಳನ್ನು ಹೊಂದಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೊ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಫುಟ್ಬಾಲ್ ಕ್ರೀಡೆಯಲ್ಲಿ ತನ್ನದೇ ಆದ ಅಭಿಮಾನಿಗಳನ್ನ ಹೊಂದಿರೋ ರೊನಾಲ್ಡೊ, ಈಗ ಸಾಮಾಜಿಕ ಜಾಲತಾಣದ ರಾಖಿ ಭಾಯ್ ಆಗಿದ್ದಾರೆ, ಹೇಗೆ ಅಂತೀರಾ..? ಇಲ್ಲಿದೆ ನೋಡಿ ಅಂಕಿ ಅಂಶ..

ರೊನಾಲ್ಡೊ ಅವರು ಇನ್‌ಸ್ಟಾಗ್ರಾನಮ್‌ನಲ್ಲಿ 639 ಮಿಲಿಯನ್, ಫೇಸ್‌ಬುಕ್‌ನಲ್ಲಿ 170 ಮಿಲಿಯನ್, ಟ್ವಿಟರ್‌ ಎಕ್ಸ್‌ನಲ್ಲಿ 113 ಮಿಲಿಯನ್ ಮತ್ತು ಯೂಟ್ಯೂಬ್‌ನಲ್ಲಿ 60.5 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಗಮನಾರ್ಹವಾಗಿ, ಅವರ ಯೂಟ್ಯೂಬ್ ಚಾನಲ್ ಅನ್ನು ಈ ತಿಂಗಳ ಆರಂಭದಲ್ಲಿ ಪ್ರಾರಂಭಿಸಲಾಗಿತ್ತು. ಈ ಚಾನೆಲ್‌ ಆರಂಭಗೊಂಡ ಮೊದಲ ದಿನವೇ 15 ಮಿಲಿಯನ್ ಚಂದಾದಾರರನ್ನು ಮತ್ತು ಮೊದಲ ವಾರದಲ್ಲಿ 50 ಮಿಲಿಯನ್ ಸಬ್‌ಸ್ಕ್ರೈಬ್‌ ಪಡೆದಿತ್ತು.ಕ್ರಿಸ್ಟಿಯಾನೋ ರೊನಾಲ್ಡೊ 1 ಬಿಲಿಯನ್‌ ಅನುಯಾಯಿಗಳನ್ನು ಹೊಂದಿದ ವಿಚಾರವನ್ನು ಟ್ವಿಟರ್‌ ಎಕ್ಸ್‌ ವಿಶೇಷ ಪೋಸ್ಟ್‌ ಮೂಲಕ ಪ್ರಕಟಿಸಿದೆ.

“ಎಲ್ಲ ಏರಿಳಿತಗಳ ನಡುವೆಯೂ ನೀವು ನನ್ನೊಂದಿಗೆ ಪ್ರತಿ ಹಂತದಲ್ಲೂ ಇದ್ದೀರಿ…ನನ್ನನ್ನು ನಂಬಿದ್ದಕ್ಕಾಗಿ, ನಿಮ್ಮ ಬೆಂಬಲಕ್ಕಾಗಿ ಮತ್ತು ನನ್ನ ಜೀವನದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಉತ್ತಮವಾದದ್ದು ಇನ್ನೂ ಬರಬೇಕಿದೆ, ಮತ್ತು ನಾವು ಒಟ್ಟಾಗಿ ಮುನ್ನಡೆಯುತ್ತೇವೆ, ಗೆಲ್ಲುತ್ತೇವೆ ಮತ್ತು ಇತಿಹಾಸವನ್ನು ರಚಿಸುತ್ತೇವೆ” ಎಂದು ರೊನಾಲ್ಡೊ ಟ್ವಿಟ್‌ ಮೂಲಕ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ರೊನಾಲ್ಡೊ ಫುಟ್ಬಾಲ್ ವೃತ್ತಿಜೀವನದಲ್ಲಿ 900 ಗೋಲುಗಳನ್ನು ಗಳಿಸಿದ ಮೊದಲ ಫುಟ್‌ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ದಾಖಲೆಯನ್ನು ಸ್ಥಾಪಿಸಿದ್ದಾರೆ. ಕ್ರೊಯೇಷಿಯಾ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಒಂದು ಗೋಲು ಬಾರಿಸುವ ಮೂಲಕ 900ನೇ ಗೋಲಿನ ಮೈಲುಗಲ್ಲಿ ನಿರ್ಮಿಸಿದ್ದರು.