ಕರ್ನಾಟಕ

ಗುರುಪ್ರಸಾದ್ ಕೊನೆಯ ಸಿನಿಮಾ ಎದ್ದೇಳು ಮಂಜುನಾಥ್-2 ಬಿಡುಗಡೆಗೆ ರೆಡಿ.‌.

ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಅವರ ಕೊನೆ ಕನಸು ಎದ್ದೇಳು ಮಂಜುನಾಥ 2 ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡದ ಹೆಸರಾಂತ ನಿರ್ದೇಶಕ ಗುರುಪ್ರಸಾದ್ ಅವರ ಕೊನೆ ಕನಸು  ಎದ್ದೇಳು ಮಂಜುನಾಥ 2 ಬಿಡುಗಡೆಗೆ ಸಿದ್ಧವಾಗಿದೆ. 2009ರಲ್ಲಿ ತೆರೆಕಂಡ 'ಎದ್ದೇಳು  ಮಂಜುನಾಥ' ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ನಾಯಕನಾಗಿ ಅಭಿನಯಿಸಿ ಮೋಡಿ ಮಾಡಿದ್ದರು. ಈಗ ಎದ್ದೇಳು ಮಂಜುನಾಥ್-2ಗೆ ಗುರುಪ್ರಸಾದ್ ಅವರೇ ಕಥೆ ಬರೆದು ನಿರ್ದೇಶನದ ಜೊತೆ ನಾಯಕನಾಗಿಯೂ ನಟಿಸಿದ್ದಾರೆ. ಈ ಚಿತ್ರದ ಕಿತ್ತೋದ ಪ್ರೇಮ ಹಾಡು ರಿಲೀಸ್ ಆಗಿದೆ..ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಿಂಪಲ್ ಸುನಿ, ನಿರ್ಮಾಪಕ ಉದಯ್ ಕೆ ಮೆಹ್ತಾ ಎದ್ದೇಳು ಮಂಜುನಾಥ್ -2 ಗೆ ಶುಭ ಹಾರೈಸಿದರು.



ಬಳಿಕ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ ಮಾತನಾಡಿ,ಗುರುಪ್ರಸಾದ್ ಇದ್ದಿದ್ದರೆ ಈ ಆಡಿಟೋರಿಯಂನಲ್ಲಿ ನಗು, ಅವರ ಓಡಾಟ, ಅಬ್ಬರ ಎಲ್ಲಾ ಇರುತಿತ್ತೇನೋ? ನಾವು ಇಂದು ಅದೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬ ಕಲಾವಿದರಿಗೂ ಒಬ್ಬ ಒಳ್ಳೆ ನಿರ್ದೇಶಕರ ಜೊತೆ ಕೆಲಸ‌ ಮಾಡಬೇಕು ಎಂಬ ಆಸೆ ಇರುತ್ತದೆ. ಆ ಆಸೆ ನನಗೂ ಇತ್ತು. ಆ ಆಸೆ ಗುರುಪ್ರಸಾದ್ ಅವರ ಕೊನೆಯ ಚಿತ್ರದಲ್ಲಿ ಈಡೇರಿದೆ ಎಂದರು.



ನಾಯಕಿ ರಚಿತಾ ಮಹಾಲಕ್ಷ್ಮಿ ಮಾತನಾಡಿ, ಇಲ್ಲಿಗೆ ಬಂದಾಗ ಸ್ವಲ್ಪ ಫೀಲಿಂಗ್ ಆಯ್ತು. ರಂಗನಾಯಕ ಸಿನಿಮಾ ಸಮಯದಲ್ಲಿ ಗುರುಪ್ರಸಾದ್ ಸರ್ ಬನ್ನಿ ಕುತ್ಕೊಳ್ಳಿ ಅಂತೆಲ್ಲಾ ಆತಿಥ್ಯ ಮಾಡಿದ್ದು ನೆನಪಾಯ್ತು. ಆ ವ್ಯಕ್ತಿಯನ್ನು ಈ ರೀತಿ ನೋಡಿದ್ದು ಬೇಸರವಾಗುತ್ತಿದೆ. ನಾನು ರಂಗನಾಯಕ ಸಿನಿಮಾಗೂ ಮೊದಲು ಸೈನ್ ಮಾಡಿದ್ದು ಎದ್ದೇಳು ಮಂಜುನಾಥ-2 ಸಿನಿಮಾಗೆ. ಗುರುಪ್ರಸಾದ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.

ನಿರ್ಮಾಪಕರಾದ ಮೈಸೂರು ರಮೇಶ್ ಮಾತನಾಡಿ, ಎದ್ದೇಳು ಮಂಜುನಾಥ್-2 ಸಿನಿಮಾದಿಂದ ಬರುವ ಲಾಭದ 50ರಷ್ಟು ಭಾಗವನ್ನು ಗುರುಪ್ರಸಾದ್ ಅವರ ಮಗಳಾದ ನಗು ಶರ್ಮಾ ಭವಿಷ್ಯಕ್ಕೆ ಮೀಸಲಿಡಲಾಗುವುದು ಎಂದರು. ಕಿತ್ತೋದ ಪ್ರೇಮ ಎಂಬ ಹಾಡಿಗೆ ಗುರುಪ್ರಸಾದ್ ಸಾಹಿತ್ಯ ಬರೆದಿದ್ದು , ನವೀನ್ ಸಜ್ಜು ಧ್ವನಿಯಾಗಿದ್ದಾರೆ. ಅನೂಪ್ ಸೀಳಿನ್ ಹಾಡಿಗೆ ಟ್ಯೂನ್ ಹಾಕಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್ ಅವರಿಗೆ ಜೋಡಿಯಾಗಿ ರಚಿತಾ ಮಹಾಲಕ್ಷ್ಮಿ ನಟಿಸಿದ್ದು, ಉಳಿದಂತೆ ಶರತ್  ಲೋಹಿತಾಶ್ವ, ಚೈತ್ರಾ ಆಚಾರ್, ವಿಘ್ನೇಶ್ ಕಟ್ಟಿ, ರವಿ ದೀಕ್ಷಿತ್ ತಾರಾಬಳಗದಲ್ಲಿದ್ದಾರೆ. ಎದ್ದೇಳು ಮಂಜುನಾಥ್ 2 ಸಿನಿಮಾಗೆ ಮೈಸೂರು ರಮೇಶ್ ಬಂಡವಾಳ ಹೂಡಿದ್ದು, ರವಿ ದೀಕ್ಷಿತ್  ಕೋ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ.  ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ.