ವಿದೇಶ

ಇಸ್ರೇಲ್​ ಹಮಾಸ್​ ಯುದ್ಧಕ್ಕೆ ವಿರಾಮ ಹಾಡಬೇಕು ಅಂದ್ರೆ ನೀವು ಹೀಗೆ ಮಾಡಬೇಕು: ಇಸ್ರೇಲ್​ ಪ್ರಧಾನಿ ಎಚ್ಚರಿಕೆ

ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಚಿಸಿದ್ರೆ ಹಾಗೂ ಒತ್ತೆಯಾಳುಗಳನ್ನ ಬಿಡುಗಡೆ ಮಾಡಲು ಒಪ್ಪಿದರೆ ನಾಳೆಯೇ ಯುದ್ಧ ನಿಲ್ಲಿಸುತ್ತೇವೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿಕೆ ಕೊಟ್ಟಿದ್ದಾರೆ.

2023ರ ಅಕ್ಟೋಬರ್ 7 ರಂದು ಇಸ್ರೇಲ್‌ ಮೇಲೆ ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಹಮಾಸ್ ಉಗ್ರ ಸಂಘಟನೆಯ ನಾಯಕ ಯಾಹ್ಯಾ ಸಿನ್ವಾರ್ ಇಸ್ರೇಲ್‌ ನಡೆಸಿದ ದಾಳಿಗೆ ಬಲಿಯಾಗಿದ್ದಾನೆ. ಇದಾದ ಕೆಲ ಗಂಟೆಗಳ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗಾಜಾದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಇಚ್ಚಿಸಿದ್ರೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒಪ್ಪಿದರೆ ನಾಳೆಯೇ ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಈ ಕುರಿತು ತನ್ನ ಎಕ್ಸ್‌ ಖಾತೆಯಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ನೆತನ್ಯಾಹು, ಯಾಹ್ಯಾ ಸತ್ತಿದ್ದಾನೆ. ಇಸ್ರೇಲ್‌ನ ಕೆಚ್ಚೆದೆಯ ಸೈನಿಕರ ದಾಳಿಯಿಂದ ಕೊಲ್ಲಲ್ಪಟ್ಟಿದ್ದಾನೆ. ಆದ್ರೆ ಇದು ಜಾದಲ್ಲಿನ ಯುದ್ಧದ ಅಂತ್ಯವಲ್ಲ, ಆರಂಭ ಎಂದು ಎಚ್ಚರಿಸಿದ್ದಾರೆ. ಮುಂದುವರಿದು, ಗಾಜಾದ ಜನರೇ ನನ್ನ ಬಳಿ ಒಂದು ಸರಳವಾದ ಸಂದೇಶವಿದೆ. ಹಮಾಸ್‌ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಿದರೆ, ಈ ಯುದ್ಧ ನಾಳೆಯೇ ಕೊನೆಗೊಳ್ಳಬಹುದು ಎಂದು ಹೇಳಿದ್ದಾರೆ.

ಜೊತೆಗೆ ಹಮಾಸ್‌ ಪ್ರಸ್ತುತ ಗಾಜಾದಲ್ಲಿ 101 ಒತ್ತೆಯಾಳುಗಳನ್ನು ಇರಿಸಿಕೊಂಡಿದೆ. ಇದರಲ್ಲಿ ಇಸ್ರೇಲ್‌ ಸೇರಿದಂತೆ ವಿವಿಧ ವಿವಿಧ ದೇಶಗಳ 23 ನಾಗರಿಕರು ಇದ್ದಾರೆ ಎಂದು ನೆತನ್ಯಾಹು ಬಹಿರಂಗಪಡಿಸಿದ್ದಾರೆ.

ಬೇಟೆಯಾಡದೇ ಬಿಡುವುದಿಲ್ಲ:
ಇಸ್ರೇಲ್‌ ತನ್ನ ದೇಶದ ನಾಗರಿಕರನ್ನು ಮಾತ್ರವಲ್ಲ, ಒತ್ತೆಯಾಳಾಗಿರುವ ಇತರ ದೇಶಗಳ ನಾಗರಿಕರನ್ನು ರಕ್ಷಿಸಿ ತಮ್ಮ ದೇಶಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಬದ್ಧವಾಗಿಯೂ ನಡೆದುಕೊಳ್ಳುತ್ತಿದೆ. ನಮ್ಮ ಒತ್ತೆಯಾಳುಗಳನ್ನು ಹಿಂದಿರುಗಿಸಿದ್ರೆ, ಅವರನ್ನ ಏನೂ ಮಾಡುವುದಿಲ್ಲ. ಒಂದು ವೇಳೆ ಅವರಿಗೆ ತೊಂದರೆ ಮಾಡಿದ್ರೆ, ಬೇಟೆಯಾಡದೇ ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಬೆಂಜಮಿನ್‌ ನೆತನ್ಯಾಹು ನೀಡಿದ್ದಾರೆ.


ಮೊದಲು ನಸ್ರಲ್ಲಾ ಹೋದ, ಆಮೇಲೆ ಹಿಜ್ಬುಲ್ಲಾ ವೋಹ್ಸೆನ್‌, ಹನಿಯೆ, ಡೀಫ್‌, ಸಿನ್ವಾರ್‌ ಸೇರಿ ಅನೇಕ ಟಾಪ್‌ ಲೀಡರ್‌ಗಳು ಹೋದರು. ಮುಂದೆ ಇರಾಕ್‌, ಸಿರಿಯಾ, ಲೆಬನಾನ್‌, ಯೆಮನ್‌ ದೇಶಗಳ ಭಯೋತ್ಪಾದನಾ ಆಳ್ವಿಕೆಯೂ ಕೊನೆಗೊಳ್ಳುತ್ತದೆ. ಆದ್ದರಿಂದ ಮಧ್ಯಪ್ರಾಚ್ಯದಲ್ಲಿ ಶಾಂತಿ, ಸಮೃದ್ಧಿ, ಉತ್ತಮ ಭವಿಷ್ಯ ಬಯಸುವ ಎಲ್ಲರೂ ಒಂದಾಗಬೇಕು. ಆಗ ಕತ್ತಲನ್ನು ದೂಡಿ ಬೆಳಕು ತರಬಹುದು ಎಂದು ಕಿವಿಮಾತು ಹೇಳಿದ್ದಾರೆ.