ಕರ್ನಾಟಕ

ಪೊಲೀಸ್ ಠಾಣೆಯಲ್ಲಿದ್ದ ಸಂವಿಧಾನ ಪೀಠಿಕೆ, ಅಂಬೇಡ್ಕರ್ ಫೋಟೋ ನಾಪತ್ತೆ; ದಲಿತ ಸಂಘಟನೆಗಳ ಆಕ್ರೋಶ

ಪೊಲೀಸ್​ ಠಾಣೆಯಲ್ಲಿದ್ದ ಅಂಬೇಡ್ಕರ್ ಫೋಟೋ, ಸಂವಿಧಾನ ಪೀಠಿಕೆ ನಾಪತ್ತೆಯಾಗಿದ್ದು, ಕವಲಂದೆ ಪೊಲೀಸ್ ಠಾಣೆ ವಿರುದ್ಧ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಮೈಸೂರು : ಅಂಬೇಡ್ಕರ್ ಫೋಟೋ, ಸಂವಿಧಾನ ಪೀಠಿಕೆಯನ್ನ  ತೆಗೆದು  ಆ ಜಾಗದಲ್ಲಿ ದೇವರ ಫೋಟೋಗಳನ್ನ ಹಾಕಿರುವ  ಘಟನೆ ನಂಜನಗೂಡು ತಾಲೂಕಿನ ಕವಲಂದೆ ಪೊಲೀಸ್ ಠಾಣೆಯಲ್ಲಿ ಬೆಳಕಿಗೆ ಬಂದಿದೆ.

ಸಬ್ ಇನ್ಸ್ ಪೆಕ್ಟರ್ ಕೊಠಡಿ ಹಾಗೂ ಠಾಣೆಯ ಕಟ್ಟಡದಲ್ಲಿದ್ದ ಅಂಬೇಡ್ಕರ್ ಫೋಟೋ, ಸಂವಿಧಾನ ಪೀಠಿಕೆ  ನಾಪತ್ತೆಯಾಗಿದ್ದು, ಕವಲಂದೆ ಪೊಲೀಸ್ ಠಾಣೆ ವಿರುದ್ಧ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. 

ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಪ್ರದರ್ಶಿಸಬೇಕೆಂಬ ನಿಯಮವಿದೆ. ಅಲ್ಲದೆ ಸಂವಿಧಾನ ಪೀಠಿಕೆಗಳನ್ನೂ ಸಹ ಪ್ರದರ್ಶನ ಮಾಡಬೇಕೆಂಬ ನಿಯಮವನ್ನ  ಜಾರಿಗೆ ತರಲಾಗಿದೆ. ಆದರೆ ನಿಯಮವನ್ನ ಗಾಳಿಗೆ ತೂರಿ,  ಇಲ್ಲಿನ ಸಬ್ ಇನ್ಸ್ ಪೆಕ್ಟರ್ ತನ್ನ ಕೊಠಡಿಯಲ್ಲಿ ದೇವರ ಫೋಟೋಗಳನ್ನ ಹಾಕಿಕೊಂಡಿದ್ದಾರೆ.

ಅಂಬೇಡ್ಕರ್ ಫೋಟೋ, ಸಂವಿಧಾನ ಪೀಠಿಕೆ  ನಾಪತ್ತೆಯಾದ ಸುದ್ದಿತಿಳಿಯುತ್ತಿದ್ದಂತೆ ದಲಿದ ಸಂಘಟನೆಗಳು ಪೊಲೀಸ್ ಠಾಣೆ ಮೆಟ್ಟಿಲೇರಿ ಆಕ್ರೋಶ ಹೊರಹಾಕಿದ್ದಾರೆ.  ದಿಢೀರ್ ಠಾಣೆಗೆ ಭೇಟಿ ಕೊಟ್ಟಾಗ ಸಿಬ್ಬಂದಿ ದಲಿತ ಸಂಘಟನೆ ಮುಖಂಡರ ಪ್ರಶ್ನೆಗೆ ಉತ್ತರಿಸಲು ತಬ್ಬಿಬ್ಬಾಗಿದ್ದಾರೆ.

ಇದು ಪೊಲೀಸ್ ಠಾಣೆಯೋ ದೇವಸ್ಥಾನವೋ ಎಂದು ಪ್ರಶ್ನಿಸಿದ್ದು, ಪೊಲೀಸ್ ಠಾಣೆ ಎಂಬ ನಾಮಫಲಕ ತೆಗೆದು ದೇವಸ್ಥಾನ ಎಂದು ಫಲಕ ಹಾಕುವಂತೆ ಟೀಕಿಸಿದ್ದಾರೆ. ಜೊತೆಗೆ ಸಬ್ ಇನ್ಸ್ ಪೆಕ್ಟರ್ ಕೃಷ್ಣಕಾಂ ಕೋಳಿ ವಿರುದ್ಧ FIR ದಾಖಲಿಸಲು ದಲಿತ ಸಂಘಟನೆಗಳು ನಿರ್ಧರಿಸಿವೆ.