ಸ್ಪೆಷಲ್ ಸ್ಟೋರಿ

ದುಃಖದಲ್ಲಿದ್ದಾಗ ಈ ಕತೆಯನ್ನೊಮ್ಮೆ ಓದಿ

ಈ ಕತೆ ನಮ್ಮ ಮನಸ್ಸಿಗೆ ಕನ್ನಡಿ ಹಿಡಿದ ಹಾಗಿದೆ. ನಾವು ಖುಷಿಯಲ್ಲಿರುವಾಗ ಒಳಗೆ ದುಃಖ. ಇನ್ನೊಬ್ಬರ ನೋವಲ್ಲಿ ಭಾಗಿಯಾದ ಹಾಗೆ ತೋರಿಸಿದರೂ ಒಳಗೊಳಗೇ ಸಂತೋಷ ಪಡುವವರು.

ಜೆನ್ ಕತೆಗಳು ಬಹಳಷ್ಟು ಜನರಿಗೆ ಸ್ಪೂರ್ತಿ ಕೊಡುತ್ತದೆ. ನೀವು ದುಃಖದಲ್ಲಿದ್ದಾಗ ಒಮ್ಮೆ ಈ ಜೆನ್ ಕತೆಯನ್ನೊಮ್ಮೊ ಓದಿ, ಮನಸ್ಸಿಗೆ ಎಷ್ಟು ಸಮಾಧಾನವಾಗುತ್ತದೆ ಎಂದು ನೋಡಿ.
ಒಂದೂರಿನಲ್ಲಿ ಒಬ್ಬ ಜೆನ್ ಮಾಸ್ಟರ್ ಇದ್ದ. ಆತನಿಗೆ ಮೌನವಾಗಿರುದೇ ಬಹಳ ಇಷ್ಟ. ಹಾಗಾಗಿ ಅವನು ಹೆಚ್ಚು ಮಾತನಾಡಿತ್ತಿರಲಿಲ್ಲ. ಅವನಿದ್ದಾಗ ಆ ವಿಹಾರದಲ್ಲಿ ಸದ್ದು ಆಗುತ್ತಿದ್ದದ್ದೇ ಕಡಿಮೆ. ಜನರೂ ಬಂದು ಮೌನವಾಗಿ ಕೂರುತ್ತಿದ್ದರು. ಮನಸ್ಸಿಗೆ ಸಮಾಧಾನ ಅನಿಸಿದ ಮೇಲೆ ಎದ್ದು ಹೋಗುತ್ತಿದ್ದರು. ಆ ವಿಹಾರದ ಪಕ್ಕದಲ್ಲೇ ಒಬ್ಬ ಅಜ್ಜಿ  ತನ್ನ ಪಾಡಿಗೆ ತಾನು ಹೂವು ಮಾರುತ್ತಾ ಜೀವನ ಸಾಗಿಸುತ್ತಿದ್ದಳು. ಅವಳಿಗೆ ಕಣ್ಣು ಕಾಣುತ್ತಿರಲಿಲ್ಲ. ಆದರೂ ಬೆಳಗ್ಗೆ ವಿಹಾರದ ಮುಂಭಾಗ ಕಸ ಗುಡಿಸಿ ಶುಚಿಯಾಗಿಡುತ್ತಿದ್ದಳು.

ಆ ಜೆನ್ ಮಾಸ್ಟರ್ ಗೆ ವಯಸ್ಸಾಗಿತ್ತು. ಒಂದು ದಿನ ಆತ ಮೃತಪಟ್ಟ. ಮರುದಿನ ಅದೇ ದಾರಿಯಾಗಿ ಬಂದ ಯುವ ಸಂನ್ಯಾಸಿಯನ್ನು ಮುದುಕಿ ಪಕ್ಕ ಕರೆದಳು. 'ಏನಪ್ಪಾ, ಗುರುಗಳ ಕಾಲವಾಯಿತೇನು?' ಅಂತ ಕೇಳಿದಳು.

'ಹೌದಮ್ಮಾ, ನಿನ್ನೆ ರಾತ್ರಿ ಧ್ಯಾನ ಮಾಡುತ್ತಿದ್ದ ಹಾಗೆ ಅವರ ಪ್ರಾಣ ಪಕ್ಷಿ ಹಾರಿ ಹೋಯ್ತು' ಅಂದ ಆ ಯುವ ಭಿಕ್ಕು 'ನಿನಗೆ ಯಾರೂ ಈ ವಿಷಯ ಹೇಳಲಿಲ್ಲವೇ?' ಅಂತ ವಿಚಾರಿಸಿದ.
'ಅಯ್ಯೋ ಕಂದ, ಇವತ್ತು ಬೆಳಗ್ಗೆ ವಿಹಾರದಲ್ಲಿ ಗಂಟೆಯ ಸದ್ದು ಕೇಳಿದಾಗಲೇ ನನಗೆ ಮನದಟ್ಟಾಯ್ತು, ಅವರು ಹೋದರು ಅಂತ. ನನಗೆ ಹೊರಗಣ್ಣು ಇರಲಿಕ್ಕಿಲ್ಲ. ಆದರೆ ಒಳಗಿನ ಕಣ್ಣು ಸೂಕ್ಷ್ಮ ಕಳೆದುಕೊಂಡಿಲ್ಲ' ಎಂದಳು ಮುದುಕಿ. ಆಮೇಲೆ ಮುಂದುವರಿಯುತ್ತಾ ಹೇಳಿದಳು, 'ಹುಡುಗಾ, ಈ ಗುರುಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಅವರು ಅಭಿನಂದನೆ ಹೇಳಿದರೆ ಅಲ್ಲಿ ಅಭಿನಂದನೆ ಮಾತ್ರ ಇರುತ್ತಿತ್ತು. ಅವರು ದುಃಖಿಸಿದರೆ ಅಲ್ಲಿ ದುಃಖ ಮಾತ್ರ ಇರುತ್ತಿತ್ತು. ನಾನು ಈವರೆಗೆ ನೋಡಿದ ಯಾರೂ ಇವರ ಹಾಗಿರಲಿಲ್ಲ. ಎದುರಿಂದ ನಗು ನಗುತ್ತಾ ಅಭಿನಂದನೆ ಹೇಳಿದರೂ ಒಳಗೊಳಗೇ ಅವರಿಗೆ ಈರ್ಷೆ ಇರುತ್ತಿತ್ತು. ಇನ್ನೊಬ್ಬರ ದುಃಖದಲ್ಲಿ ಭಾಗಿಯಾದಂತೆ ಕಂಡರೂ ಒಳಗೊಳಗೇ ಸಂತೋಷ ಪಡುತ್ತಿದ್ದರು. ತಾವು ಹೊರಗಿನಿಂದ ಏನು ಮಾಡುತ್ತಾರೋ ಒಳಗೆ ಅದರ ವಿರುದ್ಧ ಇರುತ್ತಿದ್ದರು..' ಅಂದು ಸುಮ್ಮನಾದಳು.

ಈ ಕತೆ ನಮ್ಮ ಮನಸ್ಸಿಗೆ ಕನ್ನಡಿ ಹಿಡಿದ ಹಾಗಿದೆ. ನಾವು ಖುಷಿಯಲ್ಲಿರುವಾಗ ಒಳಗೆ ದುಃಖ. ಇನ್ನೊಬ್ಬರ ನೋವಲ್ಲಿ ಭಾಗಿಯಾದ ಹಾಗೆ ತೋರಿಸಿದರೂ ಒಳಗೊಳಗೇ ಸಂತೋಷ ಪಡುವವರು. ಈ ಗುಣ ನಮ್ಮ ದುಃಖ ಹೆಚ್ಚಿಸುತ್ತದೆ. ನಗು ಬಂದರೆ ಮುಕ್ತವಾಗಿ ನಕ್ಕುಬಿಡಿ. ನೋವಾದರೆ ಅತ್ತು ಬಿಡಿ, ಆಗ ಹಾಯಾಗಿರುತ್ತೀರಾ.