ನವದೆಹಲಿ : ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದ್ದು, ಆಡಳಿತರೂಢ ಎಎಪಿಗೆ ಹಾಗೂ ಕೇಜ್ರಿವಾಲ್ಗೆ ಹಿನ್ನಡೆಯಾಗಿದೆ. ಪರ್ವೇಶ್ ವರ್ಮಾ ಎದುರು ಅರವಿಂದ್ ಕೇಜ್ರಿವಾಲ್ ಪರಾಭವಗೊಂಡಿದ್ದಾರೆ. ಸತತ ಎರಡು ಬಾರಿ ದೆಹಲಿಯ ಗದ್ದುಗೆ ಏರಿದ್ದ ಕೇಜ್ರಿವಾಲ್ ಸೋಲಿಗೆ ಅಬಕಾರಿ ನೀತಿ ಹಗರಣ ಮುಖ್ಯ ಕಾರಣವಾಗಿದೆ.
ಅರವಿಂದ್ ಕೇಜ್ರಿವಾಲ್ ಸೋಲಿಗೆ ಕಾರಣಗಳೇನು?
- ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದೇ ಗುರಿ ಎಂದು ರಾಜಕೀಯಕ್ಕೆ ಕಾಲಿಟ್ಟ ಕೇಜ್ರಿವಾಲ್ ಅವರೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವುದು.
- ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಿರುವುದು, ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಜೈಲಿಗೆ ಹೋಗಿರುವುದು.
- ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಕೇಜ್ರಿವಾಲ್ ಮದ್ಯ ಹಗರಣದಲ್ಲಿ ಜೈಲಿಗೆ ಹೋಗಿದ್ದು.
- ಒಂದು ರೀತಿಯಲ್ಲಿ ದೆಹಲಿಯಲ್ಲಿ ಆಪ್ ಸೋಲಿಗೆ ಕಾಂಗ್ರೆಸ್ ಕೂಡ ಕಾರಣ. ಲೋಕಸಭಾ ಚುನಾವಣೆಯಲ್ಲಿ 'ಇಂಡಿಯಾ' ಮೈತ್ರಿಕೂಟ ಒಟ್ಟಾಗಿ ಸ್ಪರ್ಧಿಸುವುದು, ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದು ಮೈನಸ್ ಆಗಿದೆ.
- ಪಕ್ಷದಲ್ಲಿನ ಆಂತರಿಕ ಕಲಹಗಳು ಕೂಡ ಆಪ್ ಸೋಲಿಗೆ ಕಾರಣ ಎನ್ನಬಹುದು.
- ಕೈಲಾಶ್ ಗೆಹ್ಲೋಟ್, ರಾಜ್ ಕುಮಾರ್ ಆನಂದ್ ಮುಂತಾದ ಪ್ರಮುಖ ನಾಯಕರ ರಾಜೀನಾಮೆಗಳು ಪಕ್ಷಕ್ಕೆ ಹೊಡೆತ ನೀಡಿವೆ.
- ಆಮ್ ಆದ್ಮಿ ಪಕ್ಷ ನೀಡಿದ ಕೆಲವು ಭರವಸೆಗಳಾದ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು, ನೀರು ಪೂರೈಸುವುದು ಮುಂತಾದ ಭರವಸೆಗಳನ್ನು ಈಡೇರಿಸದಿರುವುದು.
- ಮದ್ಯ ಹಗರಣ ಆ ಪಕ್ಷದ ಘನತೆಗೆ ಧಕ್ಕೆ ತಂದಿದೆ. ಯುವಕರು, ಮಹಿಳೆಯರು, ಹೊಸ ಮತದಾರರು ಆಮ್ ಆದ್ಮಿಯಿಂದ ದೂರವಾಗಿರುವಂತೆ ಕಾಣುತ್ತಿದೆ.
- ಒಂದು ಪಕ್ಷ 12 ವರ್ಷಗಳ ಕಾಲ ನಿರಂತರವಾಗಿ ಆಡಳಿತ ನಡೆಸಿದರೆ ಜನರಲ್ಲಿ ಸ್ವಲ್ಪ ಮಟ್ಟಿಗೆ ವಿರೋಧ ವ್ಯಕ್ತವಾಗುತ್ತದೆ, ಜನರು ಹೊಸತನವನ್ನು ಬಯಸುತ್ತಾರೆ.