ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ಮೈಸೂರಿನಲ್ಲಿ ದಸರಾ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ. ನಾಳೆ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಸಮಾರಂಭ ನಡೆಯಲಿದ್ದು, ಮೈಸೂರಿನ ಅರಣ್ಯ ಭವನದ ಆವರಣಕ್ಕೆ ದಸರಾ ಆನೆಗಳು ಆಗಮಿಸಲಿವೆ. ಗಜಪಯಣ ಕಾರ್ಯಕ್ರಮದ ಮೂಲಕ ಆನೆಗಳನ್ನು ನಾಡಿಗೆ ತರಲಾಗುತ್ತದೆ.
ಮೊದಲ ಹಂತದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿಗೆ ಆಗಮಿಸುತ್ತವೆ. ಎರಡನೇ ಹಂತದಲ್ಲಿ 5 ಆನೆಗಳು ಆಗಮಿಸುತ್ತವೆ. ಹೆಚ್ಚುವರಿಯಾಗಿ 4 ಮೀಸಲು ಆನೆಗಳನ್ನು ಗುರುತು ಮಾಡಲಾಗಿದ್ದು, ಸದ್ಯ 14 ಆನೆಗಳನ್ನು ಮಾತ್ರ ಮೈಸೂರಿಗೆ ಕರೆ ತರಲಾಗುತ್ತದೆ. ಅಗತ್ಯ ಬಿದ್ದರೆ ಮಾತ್ರ ಮೀಸಲು ಆನೆಗಳನ್ನು ಮೈಸೂರಿಗೆ ಕರೆತರಲು ತೀರ್ಮಾನಿಸಲಾಗಿದೆ. ನಾಳೆ ಮೈಸೂರಿಗೆ ಬರುವ ಆನೆಗಳು, ಮಾವುತರು ಹಾಗೂ ಕಾವಾಡಿಗಳ ವಾಸ್ತವ್ಯಕ್ಕಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ.
ಹೇಗಿರುತ್ತೆ ನಾಳೆ ನಡೆಯಲಿರುವ ಗಜಪಯಣ..?
ವೀರನಹೊಸಹಳ್ಳಿಯಿಂದ ಮೈಸೂರಿಗೆ ಕ್ಯಾಪ್ಟನ್ ಅಭಿಮನ್ಯು ಟೀಂ ಆಗಮನ
ನಾಳೆ ಬೆಳಗ್ಗೆ 10:20-10:45ರೊಳಗಿನ ಮುಹೂರ್ತದಲ್ಲಿ ಗಜಪಡೆಗೆ ಪುಷ್ಪಾರ್ಚನೆ
ಗಜಪಡೆಗೆ ಆರತಿ ಬೆಳಗಿ ಗಜಪಯಣಕ್ಕೆ ಚಾಲನೆ
ಬೆಳಗ್ಗೆ 10:45-11:20ರ ಒಳಗೆ ವೇದಿಕೆಗೆ ತೆರಳಿ ಕಾರ್ಯಕ್ರಮಕ್ಕೆ ಚಾಲನೆ
ಗಣ್ಯರಿಂದ ಭಾಷಣ, ಬಳಿಕ ಆನೆಗಳ ಮಾವುತರು ಕಾವಾಡಿಗರಿಗೆ ಸನ್ಮಾನ
ನಂತರ ಸ್ಥಳೀಯ ಕಲಾವಿದರು, ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ