ಬಾಗಲಕೋಟೆ: ಹೇರ್ ಡ್ರೈಯರ್ ಸ್ಫೋಟಗೊಂಡ ಭಯಾನಕ ಘಟನೆ ಬಾಗಲಕೋಟೆಯ ಇಳಕಲ್ನಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯ ಎರಡು ಮುಂಗೈ ಛಿದ್ರ ಛಿದ್ರವಾಗಿದೆ. ಕೂಡಲೇ ಬಸಮ್ಮ ಅವರನ್ನು ಇಳಕಲ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸಮ್ಮ ಅವರು ಮೃತ ಯೋಧ ಪಾಪಣ್ಣ ಅವರ ಪತ್ನಿ ಯಾಗಿದ್ದಾರೆ.
ಇನ್ನು ಶಶಿಕಲಾ ಎಂಬುವರ ಮನೆಗೆ ಹೇರ್ ಡ್ರೈಯರ್ ಕೊರಿಯರ್ ಮೂಲಕ ಬಂದಿತ್ತು. ಪಾರ್ಸಲ್ ಮೇಲೆ ಶಶಿಕಲಾ ಅವರ ಮೊಬೈಲ್ ನಂಬರ್ ಇದ್ದ ಹಿನ್ನೆಲೆಯಲ್ಲಿ ಡಿಟಿಡಿಸಿ ಕೊರಿಯರ್ ಸಿಬ್ಬಂದಿ ಶಶಿಕಲಾ ಅವರಿಗೆ ಕರೆ ಮಾಡಿ, ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಕಲೆಕ್ಟ್ ಮಾಡಿ” ಎಂದಿದ್ದಾನೆ. ಈ ವೇಳೆ ಶಶಿಕಲಾ ನಾನು ಬೇರೆ ಊರಿನಲ್ಲಿದ್ದೇನೆ ಎಂದು ಹೇಳಿದ್ದಾರೆ.
ಶಶಿಕಲಾ ಅವರು ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ ಯಾವುದೋ ಪಾರ್ಸಲ್ ಬಂದಿದೆ ತೆಗೆದುಕೊ ಎಂದು ಹೇಳಿದ್ದಾರೆ. ಆಗ, ಬಸಮ್ಮಾ ಅವರು ಕೊರಿಯರ್ ಸಿಬ್ಬಂದಿ ಬಳಿ ಪಾರ್ಸಲ್ ಪಡೆದಿದ್ದಾರೆ. ಪಾರ್ಸಲ್ ತೆರದು ನೋಡಿದಾಗ ಒಳಗಡೆ ಹೇರ್ ಡ್ರೈಯರ್ ಇತ್ತು. ಇದೇ ವೇಳೆ ಅಲ್ಲೇ ಇದ್ದ ಪಕ್ಕದ ಮನೆಯವರು ಆನ್ ಮಾಡಿ ತೋರಿಸಿ ಎಂದಿದ್ದಾರೆ. ಬಸಮ್ಮಾ ಅವರು ಹೇರ್ ಡ್ರೈಯರ್ ಸ್ವಿಚ್ ಹಾಕಿ ಆನ್ ಮಾಡಿದಾಗ ಸ್ಫೋಟಗೊಂಡಿದ್ದು, ಬಸಮ್ಮ ಅವರ ಹಸ್ತಗಳು ಛಿದ್ರಗೊಂಡಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.