ವಿದೇಶ
ಪೇಜರ್ ಬಾಂಬ್ ದಾಳಿಗೆ ಉಗ್ರರು ವಿಲ ವಿಲ..ಏನಿದು ಇಸ್ರೇಲ್ ಹೊಸ ತಂತ್ರ..?
ಬೈರೂತ್ (ಲೆಬನಾನ್): ಮನುಷ್ಯರ ಮೈಂಡ್ ಸೆಟ್ ಅರಿತವನು, ಜಗತ್ತನ್ನೇ ಗೆಲ್ಲುತ್ತಾನೆ ಅನ್ನೋ ಮಾತಿದೆ, ಅದೇ ರೀತಿ ನಿಮ್ಮ ಶತ್ರುಗಳ ದೌರ್ಬಲ್ಯ ಏನು ಅಂತಾ ನಿಮಗೆ ಅರಿವಿದ್ರೆ ಅರ್ಧ ಯುದ್ಧ ಗೆದ್ದಂತೆ ಲೆಕ್ಕ. ಇದು ಸಮರ ಕಣದಲ್ಲಿ ಚಾಲ್ತಿಯಲ್ಲಿರುವ ಮಾತು. ಇದೇ ಸೂತ್ರವನ್ನ ಇಸ್ರೇಲ್ ಪಾಲಿಸಿದೆ ಅನ್ನೋ ಅಪವಾದಗಳು ಈಗ ಕೇಳಿ ಬಂದಿವೆ. ಲೆಬನಾನ್ ದೇಶದಲ್ಲಿ ಹೆಜ್ಬೊಲ್ಲಾ ಉಗ್ರರ ಬಳಿಯಲ್ಲಿದ್ದ ಸಾವಿರಾರು ಪೇಜರ್‌ಗಳು ಏಕಕಾಲಕ್ಕೆ ಸ್ಫೋಟಗೊಂಡಿದ್ದು ಹೇಗೆ? ಈ ಕೃತ್ಯದ ಹಿಂದೆ ಇರುವವರು ಯಾರು? ಈ ಸಾಮೂಹಿಕ ಸ್ಫೋಟ ಮಾಡಲು ಸಾಧ್ಯವಾಗಿದ್ದು ಹೇಗೆ ಎಂಬ ಚರ್ಚೆಗಳು ಇದೀಗ ವಿಶ್ವಾದ್ಯಂತ ನಡೆಯುತ್ತಿವೆ.
ಲೆಬನಾನ್‌ನಲ್ಲಿ ನಡೆದ ಸರಣಿ ಪೇಜರ್ ಸ್ಫೋಟದ ಕುರಿತಾಗಿ ಈವರೆಗೆ ಯಾವ ಸಂಘಟನೆಯೂ ಹೊಣೆ ಹೊತ್ತಿಲ್ಲ. ಇಸ್ರೇಲ್ ಕೂಡಾ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಲೆಬನಾನ್‌ನ ಹೆಜ್ಬೊಲ್ಲಾ ಉಗ್ರ ಸಂಘಟನೆ ಮಾತ್ರ ನೇರಾ ನೇರ ಇಸ್ರೇಲ್ ಮೇಲೆ ಆಪಾದನೆ ಮಾಡುತ್ತಿದೆ. ಜೊತೆಯಲ್ಲೇ ಪೇಜರ್ ಸ್ಫೋಟ ನಡೆದದ್ದು ಹೇಗೆ ಅನ್ನೋದ್ರ ಕುರಿತಾಗಿ ಮಹತ್ವದ ಮಾಹಿತಿಗಳು ಹೊರಬಿದ್ದಿವೆ.
ಪೇಜರ್ ಸ್ಫೋಟ ಸಂಘಟಿಸಿದ್ದು ಹೇಗೆ?
ಹೆಜ್ಬೊಲ್ಲಾ ಉಗ್ರ ಸಂಘಟನೆ ಯಾವುದೇ ಕಾರಣಕ್ಕೂ ಮೊಬೈಲ್ ಬಳಕೆ ಮಾಡೋದಿಲ್ಲ. ಸುಲಭವಾಗಿ ಉಗ್ರರ ಲೊಕೇಷನ್ ಹಾಗೂ ಇನ್ನಿತರ ಮಾಹಿತಿ ಸಿಗುವ ಕಾರಣ ಈ ಸಂಘಟನೆ ತನ್ನ ಸದಸ್ಯರ ನಡುವೆ ಸಂವಹನ ಸಾಧಿಸಲು ಪೇಜರ್‌ಗಳನ್ನೇ ನೆಚ್ಚಿಕೊಂಡಿದೆ. ಹೆಜ್ಬೊಲ್ಲಾ ಉಗ್ರ ಸಂಘಟನೆಯ ಈ ದೌರ್ಬಲ್ಯ ಇಸ್ರೇಲ್ ಸರ್ಕಾರದ ಬೇಹುಗಾರಿಕಾ ವಿಭಾಗವಾದ ಮೊಸಾದ್‌ಗೆ ಮೊದಲಿನಿಂದಲೂ ಗೊತ್ತಿತ್ತು ಅನ್ನೋ ಮಾಹಿತಿ ಇದೆ. ಈ ಮಾಹಿತಿಯನ್ನೇ ತನ್ನ ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡ ಇಸ್ರೇಲ್, ಹೆಜ್ಬೊಲ್ಲಾ ಉಗ್ರ ಸಂಘಟನೆ ಪೇಜರ್ ಖರೀದಿ ಮಾಡುವಾಗ ಹಸ್ತಕ್ಷೇಪ ಮಾಡಿತ್ತು ಎಂದು ಹೆಜ್ಬೊಲ್ಲಾ ಉಗ್ರ ಸಂಘಟನೆಯ ಮೂಲಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ. ಸುಮಾರು 1 ಸಾವಿರ ಪೇಜರ್‌ಗಳನ್ನ ಹೆಜ್ಬೊಲ್ಲಾ ಉಗ್ರ ಸಂಘಟನೆ ಹೊಸದಾಗಿ ತರಿಸಿಕೊಳ್ಳಲು ಮುಂದಾಗಿತ್ತು. ಈ ವೇಳೆ ತನ್ನ ಕೈಚಳಕ ತೋರಿಸಿದ ಇಸ್ರೇಲ್, ಪೇಜರ್‌ಗಳ ಒಳಗೆ ಅತ್ಯಲ್ಪ ಪ್ರಮಾಣದ ಸ್ಫೋಟಕವನ್ನು ತುಂಬಿತ್ತು. ಪೇಜರ್‌ಗಳು ಮೊದಲೇ ಪುಟ್ಟ ಯಂತ್ರವಾದ ಕಾರಣ ಹೆಚ್ಚಿನ ಪ್ರಮಾಣದ ಸ್ಫೋಟಕ ತುಂಬಲು ಸಾಧ್ಯವಿಲ್ಲ. ಹೀಗಾಗಿ, ಸಣ್ಣ ಮಟ್ಟದ ಸ್ಫೋಟ ಸಂಭವಿಸುವಷ್ಟು ಶಕ್ತವಾದ ಸ್ಫೋಟಕಗಳನ್ನ ಇಸ್ರೇಲ್ ಎಲ್ಲಾ 1 ಸಾವಿರಕ್ಕೂ ಹೆಚ್ಚು ಪೇಜರ್‌ಗಳಲ್ಲಿ ತುಂಬಿತ್ತು. ಇಸ್ರೇಲ್ ಸೇನೆ, ಇಸ್ರೇಲ್‌ನ ಬೇಹುಗಾರಿಕಾ ಘಟಕವಾದ ಮೊಸಾದ್ ನಡೆಸಿದ ಜಂಟಿ ಕಾರ್ಯಾಚರಣೆ ಇದು ಎಂದು ಹೆಜ್ಬೊಲ್ಲಾ ಉಗ್ರ ಸಂಘಟನೆ ಆಪಾದಿಸಿದೆ