ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಫೆಬ್ರವರಿ 26ರವರೆಗೆ ನಡೆಯಲಿರುವ ಕುಂಭಮೇಳಕ್ಕೆ ಅಂತಿಮ ಸಿದ್ದತೆಗಳು ಭರದಿಂದ ಸಾಗಿದೆ. ಸುಮಾರು 45 ದಿನಗಳ ಕಾಲ ನಡೆಯಲಿರುವ ಕುಂಭಮೇಳದಲ್ಲಿ ಬರೋಬ್ಬರಿ 40-45 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ. 12 ವರ್ಷಕ್ಕೊಮ್ಮೆ ನಡೆಲಿರುವ ಕುಂಭಮೇಳಕ್ಕೆ ಪ್ರಯಾಗರಾಜ್‌ನ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಸರ್ವ ರೀತಿಯಲ್ಲಿ ಸಜ್ಜುಗೊಂಡಿದೆ. ಕೋಟ್ಯಂತರ ಭಕ್ತರು, ಸಾಧು, ಸಂತರು ಧಾರ್ಮಿಕ ಮುಖಂಡರು ಭಾಗವಹಿಸುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.
ಕುಂಭಮೇಳಕ್ಕೆ ಆಧ್ಯಾತ್ಮಿಕ ನಾಯಕರು ಮತ್ತು ರಾಜಕಾರಣಿಗಳ ಹೊರತಾಗಿ, ಬಾಲಿವುಡ್ ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದಾರೆ ಎನ್ನಲಾಗ್ತಿದೆ. ಮೂಲಗಳ ಪ್ರಕಾರ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ , ರಣಬೀರ್ ಕಪೂರ್, ಆಲಿಯಾ ಭಟ್ , ಅನುಪ್ ಜಲೋಟಾ, ರೇಣುಕಾ ಶಹಾನೆ, ಅಶುತೋಷ್ ರಾಣಾ, ವಿವೇಕ್ ಒಬೆರಾಯ್, ಶಂಕರ್ ಮಹಾದೇವನ್, ಕೈಲಾಶ್ ಖೇರ್, ಸೋನು ನಿಗಮ್ ಸೇರಿದಂತೆ ಹಲವು ಸೆಲೆಬ್ರಿಟಿಗಳಿಗೆ ಮಹಾ ಕುಂಭಮೇಳಕ್ಕೆ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.