ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವುಗಳ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರೂ ಮೊನ್ನೆಯಷ್ಟೇ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರವೂ ಸಾವುಗಳು ನಿಲ್ಲುತ್ತಿಲ್ಲವೆಂದರೆ ಕಾಂಗ್ರೆಸ್ ಸರ್ಕಾರದ ಅಸಡ್ಡೆತನ ನಾಡಿನ ಬಡ ಕುಟುಂಬಗಳ ತಾಯಂದಿರ ಪ್ರಾಣಗಳಿಗೆ ಸಂಚಕಾರ ತಂದೊಡ್ಡಿದೆ ಎಂದರೆ ತಪ್ಪಾಗಲಾರದು ಎಂದು ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಟ್ವೀಟ್ ಮೂಲಕ ವಾಗ್ದಾಲಿ ನಡೆಸಿರುವ ಬಿ.ವೈ ವಿಜಯೇಂದ್ರ, ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲೇ 29 ಬಾಣಂತಿಯರು ಹಾಗೂ 1 ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದರು. ಇದೀಗ ಕಳೆದ 5 ದಿನಗಳ ಅಂತರದಲ್ಲಿ ಇಬ್ಬರು ತಾಯಂದಿರು ಸಾವಿಗೀಡಾಗಿರುವ ಘಟನೆ ನಿಜಕ್ಕೂ ರಾಜ್ಯವೇ ತಲೆ ತಗ್ಗಿಸುವಂತಾಗಿದೆ.
ರಾಜ್ಯ ಸರ್ಕಾರ ಈ ಕೂಡಲೇ ಪ್ರಕರಣದ ಗಂಭೀರತೆಯನ್ನು ಅರಿತು ಉನ್ನತ ತನಿಖೆಗೆ ವಹಿಸಿ, ಬಾಣಂತಿಯರ ಸಾವಿಗೆ ಕಾರಣ ತಿಳಿದು ಬಡ ಕುಟುಂಬಗಳ ತಾಯಂದಿರ ಪ್ರಾಣ ಉಳಿಸುವ ನಿಟ್ಟಿನಲ್ಲಿ ತತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ.