ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಈಗ ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದು ರಿಲೀಸ್ ಆಗಿದ್ದಾರೆ. ಆರೋಪಿ ದರ್ಶನ್ ಜೈಲಿನಿಂದ ಹೊರಬಂದು 2 ವಾರ ಕಳೆದಿವೆ. ಸದ್ಯ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಮಧ್ಯಂತರ ತಡೆ ತೆರವು ಕೋರಿ ಪೊಲೀಸರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಕೆ ಮುಂದಾಗಿದ್ದಾರೆ. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ಪರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಗೃಹಸಚಿವ ಪರಮೇಶ್ವರ್ , ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಕೆಗೆ ವಿಳಂಬವೇನೂ ಆಗಿಲ್ಲ. ಮೇಲ್ಮನವಿ ಯಾವಾಗ ಸಲ್ಲಿಸಬೇಕೆಂಬುವದನ್ನು ಗೃಹ ಇಲಾಖೆ ಕಾರ್ಯದರ್ಶಿಗಳು ತೀರ್ಮಾನ ಮಾಡುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೇಲ್ಮನವಿ ಸಲ್ಲಿಸುವುದಾದರೆ ಸಲ್ಲಿಸಿ ಎಂದೂ ನಾನು ಕೂಡ ಸೂಚನೆ ನೀಡಿದ್ದೇನೆ. ಇಂತಹ ಪ್ರಕರಣಗಳಲ್ಲಿ ಪ್ರೊಸೀಜರ್ಗಳನ್ನ ಅನುಸರಿಸಿಯೇ ಮುಂದುವರಿಯಬೇಕಾಗುತ್ತದೆ. ಇನ್ನು ಮೇಲ್ಮನವಿ ವಿಚಾರವಾಗಿ ಕಾನೂನು ಇಲಾಖೆ, ಗೃಹ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಪ್ರಸ್ತಾವನೆ ಬರಬೇಕು. ಈ ಪ್ರಕ್ರಿಯೆ ಆದ ನಂತರವೇ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ ಎಂದು ಹೇಳಿದರು.