ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುಧ್ಧ ಭ್ರಷ್ಟಾಚಾರ ಆರೋಪ ಮಾಡಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ, ಚಂದ್ರಶೇಖರ್ ಕೆಂಡಾಮಂಡಲವಾಗಿದ್ದಾರೆ. ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ಕುಮಾರಸ್ವಾಮಿ ಅವರು ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳನ್ನು ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೇ ಜಾಮೀನಿನ ಮೇಲಿರುವ ಈ ಆರೋಪಿ ಹೆಚ್.ಡಿ.ಕುಮಾರಸ್ವಾಮಿ ನಮ್ಮ ಕರ್ತವ್ಯ ನಿಭಾಯಿಸದಂತೆ ಈ ರೀತಿ ಮಾಡಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳ ಮನಸ್ಸಿನಲ್ಲಿ ಭಯ ಮೂಡಿಸುವುದು ಅವರ ಉದ್ದೇಶವಾಗಿದೆ. ಆದರೆ ಒಬ್ಬ ಆರೋಪಿ, ಅವನು ಎಷ್ಟೇ ಉನ್ನತ ಮತ್ತು ಶಕ್ತಿಶಾಲಿಯಾಗಿದ್ದರೂ, ಅವನು ಆರೋಪಿಯಾಗಿಯೇ ಇರುತ್ತಾನೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, ಹಂದಿಗಳೊಂದಿಗೆ ಎಂದಿಗೂ ಕುಸ್ತಿಯಾಡಬೇಡಿ. ನೀವಿಬ್ಬರೂ ಕೊಳಕಾಗುತ್ತೀರಿ ಮತ್ತು ಹಂದಿಯು ಅದನ್ನು ಇಷ್ಟಪಡುತ್ತದೆ ಎಂಬ ವ್ಯಾಖ್ಯಾನದ ಮೂಲಕ ಹೆಚ್ಡಿಕೆಗೆ ತಿರುಗೇಟು ನೀಡಿದ್ದಾರೆ. ನಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಎದುರಿಸುವ ಅಪರಾಧಿಗಳು ಮತ್ತು ಆರೋಪಿಗಳು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ನಮ್ಮನ್ನು ತಡೆಯಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.