ಕನ್ನಡ ಚಿತ್ರರಂಗದಿಂದ ಬಂದವನು ನಾನು, ಅಂದಿನ ಚಿತ್ರ ಕಥೆಗಳು ಇಂದಿನ ಚಿತ್ರ ಕಥೆಗಳ ನಡುವೆ ಬಹಳ ವ್ಯತ್ಯಾಸವಿದೆ. ಸಮಾಜವನ್ನು ಯಾವ ದಿಕ್ಕಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಬೇಸರವಾಗುತ್ತದೆ. ಡಾ.ರಾಜ್ ಕುಮಾರ್ ಅವರು ಹಾಡಿರುವ 'ಹಾಲಿನ ಹೊಳೆಯೋ.. ಜೇನಿನ ಮಳೆಯೋ..' ಹಾಡನ್ನು ಕೇಳುತ್ತಾ ಅನೇಕ ಸಲ ಮೈಮರೆತಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇಂದಿನ ಚಿತ್ರರಂಗದಲ್ಲಿ ಉತ್ತಮ, ಸದಭಿರುಚಿಯ ಚಿತ್ರಗಳು ಬರಬೇಕು, ಉತ್ತಮ ಕಥೆಗಳ, ಸಮಾಜಕ್ಕೆ ಒಳ್ಳೆಯದು ಮಾಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಸಮಾಜದಲ್ಲಿ ನೆಮ್ಮದಿಯ ವಾತಾವರಣ ನೆಲೆಸಬೇಕಿದೆ. ಮನುಷ್ಯ ಸಂಬಂಧಗಳು ಹಾಳಾಗಬಾರದು. ಅವುಗಳನ್ನು ಕಾಪಾಡಿಕೊಳ್ಳಬೇಕು. ಹಳ್ಳಿಗಳಲ್ಲಿ ಎಲ್ಲರೂ ಕೂತು ಪಂಕ್ತಿಭೋಜನ ಮಾಡುವ ದಿನಗಳು ಮತ್ತೆ ಬರಬೇಕು. ಈಗ ಎಲ್ಲವೂ ಇದೆ, ಆದರೆ ಏನೂ ಇಲ್ಲದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹಿಂದಿನ ನಮ್ಮ ಸಂಸ್ಕೃತಿ, ಬಾಂಧವ್ಯ, ಸಂಬಂಧಗಳು ಮರುಕಳಿಸಬೇಕು ಎಂಬ ಆಶಯವನ್ನು ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದರು.