ಒಂದು ಕಾಲದ ಗೆಳೆಯ, ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಶಾಸಕ ಜನಾರ್ದನ ರೆಡ್ಡಿ ಕೆರಳಿ ಕೆಂಡವಾಗಿದ್ದಾರೆ. ಸತೀಶ್ ಜಾರಕಿಹೊಳಿ ಸೋಲಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಜೊತೆ ಶ್ರೀರಾಮುಲು ಸೇರುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.. ಬೆಂಗಳೂರಿನ ತಮ್ಮ ನಿವಾಸ ಪಾರಿಜಾತದಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ದನ ರೆಡ್ಡಿ, ಸಂಡೂರು ಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಅಂತ ಹೇಳೋದು ನನ್ನ ಜಯಮಾನವಲ್ಲ, ನನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದು ಹೈಕಮಾಂಡ್ ನಾಯಕರೇ ಹೊರತು ಯಾರೋ ಸಹಾಯದಿಂದ ಅಲ್ಲ, ನನ್ನಿಂದ ಬೆಳೆದವರ ಸಹಾಯ ಪಡೆದು ನಾನು ಬಿಜೆಪಿ ಪಕ್ಷಕ್ಕೆ ಸೇರಿದವನು ಅಲ್ಲ ಎಂದು ಗುಡುಗಿದ್ದಾರೆ.
ವರಿಷ್ಠರು ಶ್ರೀರಾಮುಲುಗೆ ಏನು ಹೇಳಿದ್ದಾರೆ ಗೊತ್ತಿಲ್ಲ
ಹೈಕಮಾಂಡ್ ನಾಯಕರು ಶ್ರೀರಾಮುಲು ಅವರಿಗೆ ಏನ್ ಕೇಳಿದ್ದಾರೋ ನನಗೆ ಗೊತ್ತಿಲ್ಲ. ಯಾವ ಆಧಾರ ಮೇಲೆ ಯಾವ ಪ್ರಶ್ನೆ ಕೇಳಿದ್ರೋ ನನಗೆ ಗೊತ್ತಿಲ್ಲ. ಸಂಡೂರು ಚುನಾವಣೆ ಸೋಲಿನ ಕುರಿತು ಸದಾನಂದಗೌಡ ಅವರು ವರದಿ ತಯಾರಿಸಿದ್ದಾರೆ. ನಾನು ಕೂಡ ಮಾಹಿತಿ ನೀಡಿದ್ದೇನೆ. ನಾನು ಯಾರೊಬ್ಬರ ಮೇಲೂ ಆರೋಪ ಮಾಡಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಶ್ರೀರಾಮುಲು ಬೇಕು ಅಂದ್ರೂ ಬೇಡ ಅಂದ್ರೂ ಜನಾರ್ದನ ರೆಡ್ಡಿ ದೃಷ್ಟಿಯಲ್ಲ ಸ್ನೇಹಿತನೇ. ನಾನು ಒಂದು ಬಾರೀ ಸ್ನೇಹ ಮಾಡಿದ್ರೆ ನಾನು ಯಾವತ್ತು ಶತ್ರು ಥರ ನೋಡಲ್ಲ. ನನ್ನ ಮೇಲೆ ಆರೋಪ ಮಾಡಿ ಬಿಡುತ್ತೇನೆ ಅಂತ ಹೇಳಿದ್ದು ತಪ್ಪು. ನಾನು 40 ವರ್ಷ ಸಹಾಯ ಮಾಡಿರೋದು ನೆನಪಿಸಿಕೊಳ್ಳದೇ ಈ ರೀತಿ ಆರೋಪ ಮಾಡೋದು ಸರಿಯಲ್ಲ, ನಾನು ಕರ್ಮವನ್ನ ನಂಬುತ್ತೇನೆ. ಆ ದೇವರಿಗೆ ಎಲ್ಲವನ್ನೂ ಬಿಡುತ್ತೇನೆ ಎಂದಿದ್ದಾರೆ.
ದೇವರ ಮುಂದೆ ಕ್ಷಮೆ ಕೇಳಿದ್ರೆ ಶ್ರೀರಾಮುಲು ಜೊತೆ ಕೆಲಸ ಮಾಡ್ತೀನಿ
ತನ್ನ ತಪ್ಪು ತಿಳಿದುಕೊಂಡು ದೇವರ ಮುಂದೆ ಕ್ಷಮೆ ಕೇಳಿದ್ರೆ ನಾನು ಅವರ ಜೊತೆ ಕೆಲಸ ಮಾಡ್ತೀನಿ, ಅಷ್ಟೇ ಅಲ್ಲ ಹೈಕಮಾಂಡ್ ಹೇಳಿದ್ರೂ ನಾನು ಕೆಲಸ ಮಾಡ್ತೀನಿ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.. ನನ್ನ ಕುರಿತು ವರಿಷ್ಠರಿಗೆ ದೂರು ಕೊಟ್ಟಿರೋ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.. ತಾಯಿ ಮಗುವನ್ನು ನೋಡಿಕೊಳ್ಳೋ ರೀತಿ ನಾನು ಶ್ರೀರಾಮುಲು ಅವರನ್ನ ನೋಡಿಕೊಂಡಿದ್ದೇನೆ. ನಾನು ಈ ಹಿಂದೆ ಬೇರೆ ಪಕ್ಷ ಕಟ್ಟುವಾಗಲೂ ಕೂಡ ಅವರನ್ನ ಕರೆದಿಲ್ಲ.. ಶ್ರೀರಾಮುಲು ಪಕ್ಷ ಬಿಟ್ಟು ಹೋಗೋದು ಇದು ಹೊಸದಲ್ಲ ಅಂತಾ ವ್ಯಂಗ್ಯವಾಡಿದ್ದಾರೆ.