ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 'ಒಂದು ರಾಷ್ಟ್ರ, ಒಂದೇ ಚುನಾವಣೆ'ಗೆ ಸಂಬಂಧಿತ ಎರಡು ಪ್ರತ್ಯೇಕ ಮಸೂದೆಗಳನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಿದೆ. ಲೋಕಸಭೆ ಕಲಾಪ ಕಾರ್ಯಸೂಚಿಯಲ್ಲಿ ಮಸೂದೆ ಮಂಡನೆಗೆ ಅವಕಾಶ ಕೇಳಲಾಗಿದೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಎಲೆಕ್ಷನ್ ನಡೆಸಲು ಅವಕಾಶ ಕಲ್ಪಿಸುವ ‘ಒನ್ ನೇಷನ್, ಒನ್ ಎಲೆಕ್ಷನ್’ ವಿಧೇಯಕ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಈ ಹಿನ್ನೆಲೆ ಉಭಯ ಸದನದಲ್ಲಿ ಕಡ್ಡಾಯ ಹಾಜರಾತಿಗೆ ತನ್ನ ಸಂಸದರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ವಿಪ್ ಜಾರಿ ಮಾಡಿವೆ. ಕೇಂದ್ರ ಸಚಿವ ಸಂಪುಟವು ಈ ತಿಂಗಳ ಆರಂಭದಲ್ಲಿ 'ಒಂದು ರಾಷ್ಟ್ರ ಒಂದು ಚುನಾವಣೆ' ವಿಧೇಯಕ ಮಂಡನೆ ಮಾಡಲು ಅನುಮೋದನೆ ನೀಡಿತ್ತು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಬೆಂಬಲಿಸುತ್ತಿದ್ದರೆ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸೇರಿ ಹಲವಾರು ವಿರೋಧ ಪಕ್ಷಗಳು ವಿಧೇಯಕವನ್ನು ವಿರೋಧಿಸುತ್ತಿವೆ.