ಕರ್ನಾಟಕ

ಆಗಸದಲ್ಲಿ ಲೋಹದ ಹಕ್ಕಿಗಳ ಸಾಹಸ.. ಏರ್‌ಶೋಗೆ ರಕ್ಷಣಾ ಸಚಿವರಿಂದ ಚಾಲನೆ

ದೇಶೀಯ ವಿಮಾನಗಳ ಜೊತೆಗೆ ರಷ್ಯನ್ ಮತ್ತು ಅಮೆರಿಕನ್‌ ಫೈಟ್ ಏರ್‌ಕ್ರಾಫ್ಟ್​ ಏರ್ ಶೋನ ಪ್ರಮುಖ ಆಕರ್ಷಣೆಯಾಗಿವೆ. ಏರ್​ಶೋ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ದೇಶಗಳ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ.

ಇಂದಿನಿಂದ 5 ದಿನಗಳ ಕಾಲ ನಡೆಯಲಿರುವ ಏರೋ ಇಂಡಿಯಾ-2025 ಏರ್ ಶೋ ಇಂದು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಚಾಲನೆ ನೀಡಿದ್ದಾರೆ. ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರವರಿ 10 ರಿಂದ 14ರವರೆಗೆ ಏರ್‌ ಶೋ ಹಮ್ಮಿಕೊಳ್ಳಲಾಗಿದೆ. ದೇಶೀಯ ವಿಮಾನಗಳ ಜೊತೆಗೆ ರಷ್ಯನ್ ಮತ್ತು ಅಮೆರಿಕನ್‌ ಫೈಟ್ ಏರ್‌ಕ್ರಾಫ್ಟ್ ಏರ್ ಶೋನ ಪ್ರಮುಖ ಆಕರ್ಷಣೆಯಾಗಿವೆ. ಏರ್ಶೋ ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ದೇಶಗಳ ರಕ್ಷಣಾ ಸಚಿವರು ಭಾಗಿಯಾಗಿದ್ದಾರೆ. ಏರ್ ಶೋದಲ್ಲಿ ಭಾರತದ 750 ಕಂಪನಿಗಳು ಮಾತ್ರವಲ್ಲ ಎಐ ಡ್ರೋನ್, ಸೈಬರ್ ಸೆಕ್ಯುರಿಟಿ, ಗ್ಲೋಬರ್ ಏರೋಸ್ಪೇಸ್ ನಂತಹ ನೂತನ ತಂತ್ರಜ್ಞಾನಗಳು ಇರಲಿದೆ. ಆತ್ಮನಿರ್ಭರ ಭಾರತ ಉತ್ಪನ್ನಗಳು ಕೂಡ ಈ ಬಾರಿಯ ಶೋನಲ್ಲಿ ಇರಲಿವೆ. ಈ ಬಾರಿ ಏರ್ ಶೋ ಗೆ ಎಐ ಆಧಾರಿತ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಸುರಕ್ಷತೆ ನೀಡುವುದಕ್ಕಾಗಿ ಬೆಂಗಳೂರು ಪೊಲೀಸ್, ಸಿಐಎಸ್‌ಎಫ್ ಮತ್ತು ಗುಪ್ತಚರ ಸಂಸ್ಥೆಗಳ ಸಹಯೋಗದೊಂದಿಗೆ ಕೃತಕ ಬುದ್ಧಿಮತ್ತೆ ಸೇರಿ ಬಹುಹಂತದ ಭದ್ರತಾ ವ್ಯವಸ್ಥೆ ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿಯನ್ನು ಅರಿಯಲು ದಿನದ 24 ಗಂಟೆ ಸಿಸಿ ಕ್ಯಾಮರಾ ಮೇಲ್ವಿಚಾರಣೆ, ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ ಮತ್ತು ಅಗ್ನಿ ಸುರಕ್ಷತಾ ಸಮಿತಿ ಸಜ್ಜುಗೊಂಡಿದೆ. ಕಾರ್ಯಕ್ರಮ ಉದ್ಘಾಟನೆಯಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌, ಕರ್ನಾಟಕವು ಈ ಪ್ರಯಾಣದಲ್ಲಿ ಮುಂಚೂಣಿಯಲ್ಲಿದ್ದು, ನಾವೀನ್ಯತೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಆಕರ್ಷಿಸುತ್ತಿದೆ. ಬೆಂಗಳೂರು ದೇಶದ ಏರೋಸ್ಪೇಸ್ ರಾಜಧಾನಿಯಾಗಿದ್ದು, ಏರೋಸ್ಪೇಸ್ ಉತ್ಪಾದನೆ ಮತ್ತು ರಕ್ಷಣಾ ಸಂಶೋಧನೆಯಲ್ಲಿ ಸುಮಾರು 60% ಕೊಡುಗೆ ನೀಡುತ್ತದೆ. ಬೆಂಗಳೂರು ಒಂದೇ ನಗರದಲ್ಲಿ ವಾಣಿಜ್ಯ ಮತ್ತು ರಕ್ಷಣಾ ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿರುವ ವಿಶ್ವದ ಏಕೈಕ ನಗರವಾಗಿದೆ. ವಿವಿಧ ರಾಷ್ಟ್ರಗಳೊಂದಿಗೆ ಪಾಲುದಾರಿಕೆಯ ಮೂಲಕ ಭಾರತೀಯ ಏರೋಸ್ಪೇಸ್ ಬಲಗೊಳ್ಳುತ್ತಿದೆ ಎಂದಿದ್ದಾರೆ.