ಮೈಸೂರು : ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಸ್ನೇಹಮಯಿ ಕೃಷ್ಣ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವುದಾಗಿ ಸ್ನೇಹಮಯಿ ಕೃಷ್ಣ ಹೇಳಿದ್ದರು. ಆದರೆ ಇದೀಗ ಸುಪ್ರಿಂಕೋರ್ಟ್ಗೆ ಮೇಲ್ಮಮನವಿ ಸಲ್ಲಿಸದಿರಲು ಸ್ನೇಹಮಯಿ ಕೃಷ್ಣ ನಿರ್ಧರಿಸಿದ್ದಾರೆ.
ಈ ಬಗ್ಗೆ ಪೇಸ್ ಬುಕ್ ಪೋಸ್ಟ್ ಹಂಚಿಕೊಂಡಿರುವ ಸ್ನೇಹಮಯಿ ಕೃಷ್ಣ, “ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯವು ನನ್ನ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಅಂಶಗಳನ್ನು ಓದಿದ ನಂತರ ಎರಡು ದಿನಗಳ ಕಾಲ ಚಿಂತನೆ ನಡೆಸಿ ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ನನ್ನ ಕೆಲವು ಆತ್ಮೀಯ ವಕೀಲರೊಂದಿಗೆ ಹಿತೈಷಿಗಳೊಂದಿಗೆ ಚರ್ಚೆ ನಡೆಸಿ ನನ್ನ ಇದುವರೆಗಿನ ಕಾನೂನು ಹೋರಾಟದ ಅನುಭವವನ್ನು ಆಧರಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಮತ್ತಷ್ಟು ಕಾಲ ವಿಳಂಬ ಮಾಡುವ ಬದಲು, ಲೋಕಾಯುಕ್ತ ಅಧಿಕಾರಿಗಳು ಏನೇ ವರದಿ ಸಲ್ಲಿಸಿದರೂ ಸಹ ನನ್ನ ಬಳಿ ಇರುವ ಮತ್ತು ಲಭ್ಯವಾಗುವ ಸಾಕ್ಷ್ಯಾಧಾರಗಳನ್ನು ಆಧರಿಸಿ ಮಾನ್ಯ ನ್ಯಾಯಾಲಯದಲ್ಲಿ ನಾನು ಮಾಡಿರುವ ಆರೋಪದಿಂದ ಆರೋಪಿತರಿಗೆ ಶಿಕ್ಷೆ ಕೊಡಿಸಬಹುದು ಎಂಬ ವಿಶ್ವಾಸ ಮೂಡಿದ್ದರಿಂದ ವಕೀಲರ ಪರೋಕ್ಷ ಸಹಕಾರ ಪಡೆದುಕೊಂಡು, ಅವಶ್ಯಕತೆ ಬಿದ್ದರೆ ವಕೀಲರನ್ನು ನೇಮಕ ಮಾಡಿಕೊಳ್ಳುವ ಹಕ್ಕನ್ನು ಉಳಿಸಿಕೊಂಡು ಖುದ್ದಾಗಿ ನಾನೇ ಮಾನ್ಯ ನ್ಯಾಯಾಲಯಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸಿ ವಾದ ಮಂಡನೆ ಮಾಡಿ, ನಾನು ಮಾಡಿರುವ ಆರೋಪವನ್ನು ಸಾಬೀತು ಪಡಿಸಿ. ಆದಷ್ಟು ಬೇಗ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನಿರ್ಧರಿಸಿದ್ದೇನೆ” ಎಂದಿದ್ದಾರೆ.